ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜಧಾನಿ ಪಣಜಿಯ ಹಳೆಯ ಮಾಂಡವಿ ಸೇತುವೆಯನ್ನು ದುರಸ್ತಿ ಮತ್ತು ಇತರ ಅಗತ್ಯ ಕೆಲಸಗಳಿಗಾಗಿ ಮುಚ್ಚಲಾಗಿದ್ದು, ವಾಹನ ಸಂಚಾರವನ್ನು ಮತ್ತೊಂದು ಸೇತುವೆಯತ್ತ ತಿರುಗಿಸಲಾಗಿದೆ. ಉತ್ತರ ಗೋವಾ ಸಾರಿಗೆ ಇಲಾಖೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಪ್ರತಿಯೊಬ್ಬರೂ ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸುವಂತೆ ಕೇಳಿಕೊಂಡಿದೆ.
ಈ ಆದೇಶದ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲದ ಕಾರಣ, ಈ ಸೇತುವೆ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಸಂಚಾರ ದಟ್ಟಣೆ ಉಂಟಾಗುವಂತಾಗಿದೆ. ಬೆಳಿಗ್ಗೆ ಕೆಲಸಕ್ಕಾಗಿ ಮನೆಗಳಿಂದ ಹೊರಟ ಜನರು ಸೇತುವೆಯ ಬಳಿ ಸಿಲುಕಿಕೊಂಡಿದ್ದಾರೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಬಿಸಿಲ ಬೇಗೆ, ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಬಳಿ ನಡೆಯುತ್ತಿರುವ ನಿರ್ಮಾಣ ಕಾರ್ಯದಿಂದ ಉತ್ಪತ್ತಿಯಾಗುವ ಧೂಳು ಸೇರಿದಂತೆ, ಎಲ್ಲರೂ ತೊಂದರೆ ಅನುಭವಿಸುವಂತೆ ಮಾಡಿದೆ.
ಪಣಜಿಯ ಕದಂಬ ಬಸ್ ನಿಲ್ದಾಣದಿಂದ ಹಳೆಯ ಸೇತುವೆಗೆ ಹೋಗುವ ರಸ್ತೆಯನ್ನು ಮುಚ್ಚಲಾಗಿದೆ. ಆದ್ದರಿಂದ, ಪ್ರಯಾಣಿಕರು ಈಗ ಅಟಲ್ ಸೇತು ಅಡಿಯಲ್ಲಿ ಪರ್ಯಾಯ ಮಾರ್ಗವನ್ನು ತೆಗೆದುಕೊಳ್ಳಬೇಕಾಗಿದೆ. ಮುಂದಿನ 15 ದಿನಗಳವರೆಗೆ ಸಾರಿಗೆಯನ್ನು ಈ ರೀತಿ ಯೋಜಿಸಲಾಗುವುದು. ಪಣಜಿ ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ಪಣಜಿಯ ಮುಖ್ಯ ಪ್ರದೇಶದಲ್ಲಿ 5 ರಸ್ತೆಗಳು ಈಗಾಗಲೇ ಮುಚ್ಚಲ್ಪಟ್ಟಿವೆ. ಇದೀಗ ಮಾಂಡವಿ ಹಳೆಯ ಸೇತುವೆ ಬಂದ್ ಮಾಡಿದ್ದರಿಂದ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯಾವಾಗಲೂ 9:30 ರ ಹೊತ್ತಿಗೆ ಕೆಲಸದಲ್ಲಿ ಇರುತ್ತಿದ್ದವರು ಈಗ ಮಧ್ಯಾಹ್ನ 12 ಗಂಟೆಯಾದರೂ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಪರ್ವರಿಯ ಟ್ರಾಫಿಕ್ ಪರಿಸ್ಥಿತಿಯನ್ನು ಗಮನಿಸಿದರೆ, ಯಾವುದೇ ಸುಧಾರಣೆಯ ನಿರೀಕ್ಷೆಯಿಲ್ಲ.