ಸುದ್ದಿ ಕನ್ನಡ ವಾರ್ತೆ
ಶಿವಮೊಗ್ಗ : ಆನಂದಪುರ: ೨೬ ಜನವರಿ ೨೦೨೫, ರವಿವಾರ ದಂದು ಶ್ರೀ ಸೀತಾರಾಮ ಸಭಾಭವನ ಬಸವನಬೀದಿ ಅನಂದಪುರದಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆಯು ಸಂಪನ್ನವಾಯಿತು. ಸನಾತನ ಸಂಸ್ಥೆಯ ಸೌ. ಸೀಮಾ ಹಿರೇಮಠ್, ವಿದ್ಯಾವರ ಕರೆಸ್ಪಾಂಡೆನ್ಸ್ ಕಾಲೇಜ್ ನ ಡಾ|| ಮಂಜುನಾಥ್ ಪಾಂಡೆ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ವಿಜಯ್ ರೇವಣಕರ್, ಕಾರ್ಯಕ್ರಮವನ್ನು ದೀಪಪ್ರಜ್ವಲನೆಯ ಮೂಲಕ ಪ್ರಾರಂಭಿಸಲಾಯಿತು.
ಧರ್ಮಗ್ಲಾನಿಯ ಕಾಲದಲ್ಲಿ ಹಿಂದೂಗಳು ಧರ್ಮಶಿಕ್ಷಣ ಪಡೆದು ಧರ್ಮಪಾಲನೆಯನ್ನು ಮಾಡಿ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಿಕೊಳ್ಳೂಣ!
– ಸೌ. ಸೀಮಾ ಹಿರೇಮಠ್, ಸನಾತನ ಸಂಸ್ಥೆ
ಸನಾತನ ಸಂಸ್ಥೆಯ ವಕ್ತಾರರಾದ ಸೌ. ಸೀಮಾ ಹಿರೇಮಠ್ ಇವರು ತಮ್ಮ ಪ್ರವಚನದಲ್ಲಿ ಹಿಂದೂ ಧರ್ಮದಲ್ಲಿ ಹೇಳಲಾದ ಪ್ರತಿಯೊಂದು ಆಚರಣೆಗಳ ಹಿಂದೆ ವಿಜ್ಞಾನವಿದೆ, ಅಧ್ಯಾತ್ಮವಿದೆ ಮತ್ತು ಈಶ್ವರನ ಅಧಿಷ್ಠಾನವಿದೆ, ಎಲ್ಲರಿಗೂ ಮಂಗಳವಾಗಲಿ ಎಂಬ ಆಶಯ ಇದೆ ಎಂದು ಸನಾತನ ಧರ್ಮದ ವೈಜ್ಞಾನಿಕತೆಯ ಬಗ್ಗೆ ಹಾಗೂ ಶ್ರೇಷ್ಠತ್ವದ ಬಗ್ಗೆ ವಿವರಿಸಿದರು. ವರ್ತಮಾನ ಕಾಲದಲ್ಲಿ ಹಿಂದೂಗಳು ಧರ್ಮದಿಂದ ದೂರ ಹೋಗಿರುವುದರಿಂದಲೇ ಅನೇಕ ಸಂಕಟಗಳನ್ನು ಮತ್ತು ಆಘಾತಗಳನ್ನು ಎದುರಿಸಬೇಕಾಗಿದೆ. ನಮ್ಮ ಹೆಣ್ಣು ಮಕ್ಕಳ ಕಥೆ ‘ಕೇರಳ ಸ್ಟೋರಿ‘ ಹಾಗೆ ಆಗಬಾರದಾದರೆ ಹೆಣ್ಣುಮಕ್ಕಳಿಗೆ ಧರ್ಮ ಶಿಕ್ಷಣವನ್ನು ನೀಡಿ, ಧರ್ಮ ಜಾಗೃತಿಯನ್ನು ಮೂಡಿಸಬೇಕಾಗಿದೆ. ನಾವೆಲ್ಲರೂ ಈ ಕ್ಷಣದಿಂದ ಧರ್ಮಪಾಲನೆಯನ್ನು ಮಾಡಿ ಸಾಧನೆಯನ್ನು ಪ್ರಾರಂಭಿಸಿ ಸನಾತನ ಧರ್ಮರಕ್ಷಣೆಯ ದಿವ್ಯ ಸಂಕಲ್ಪ ಮಾಡೋಣ ಎಂದು ಉಪಸ್ಥಿತರಿಗೆ ಕರೆ ನೀಡಿದರು.
ಸನಾತನ ಧರ್ಮಾಚರಣೆಯಿಂದಲೇ ನಾವು ಬದುಕುಳಿಯಲು ಸಾಧ್ಯ
– ಡಾ|| ಮಂಜುನಾಥ್ ಪಾಂಡೆ
ಇವರು ಮಾತನಾಡುತ್ತ ಇಂದು ನಮ್ಮ ಮಕ್ಕಳಿಗೆ ಸುಸಂಸ್ಕಾರ ಕಲಿಸಿಕೊಡುವಂತಹ ಸ್ಥಿತಿ ನಿರ್ಮಾಣ ವಾಗಿದೆ, ಇಂದಿನ ಯುವ ಪೀಳಿಗೆ ಧರ್ಮಾಚರಣೆ ಇಲ್ಲದೆ ವ್ಯಸನಗಳಿಗೆ ಬಲಿಯಾಗುತ್ತಿದ್ದು ಇದರಿಂದ ಹೊರಬರಬೇಕಾದರೆ ಇಂದು ಸನಾತನ ಧರ್ಮದ ಆಚರಣೆಗಳನ್ನು ಅಳವಡಿಸಿಕೊಳ್ಳಬೇಕಿದೆ ಧರ್ಮಾಚರಣೆ, ಧರ್ಮ ಶಿಕ್ಷಣ ಯೋಗ್ಯ ಮಾರ್ಗದರ್ಶನ ನೀಡುವ ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿಯ ಮಾರ್ಗದರ್ಶನ ಪಡೆದು ನಮ್ಮ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರೂ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಕೈ ಜೋಡಿಸಬೇಕಿದೆ ಎಂದು ಉಪಸ್ಥಿತರಿಗೆ ಕರೆ ನೀಡಿದರು.
ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಂಘಟಿತರಾಗಿ ಹೋರಾಡಬೇಕಿದೆ!
– ಶ್ರೀ. ವಿಜಯ್ ರೇವಣಕರ್, ಹಿಂದೂ ಜನಜಾಗೃತಿ ಸಮಿತಿ
ಇವರು ಮಾತು ಮುಂದುವರೆಸಿ ದೇಶವನ್ನು ಆಳಿದ ಮೊಘಲರು, ಬ್ರಿಟಿಷರು , ಪೋರ್ಚುಗೀಸರು, ಪ್ರತಿಯೊಬ್ಬರೂ ಧರ್ಮವನ್ನು ಗುರಿಯಾಗಿಸಿ ಹಿಂದೂ ಧರ್ಮವನ್ನು ನಾಶ ಮಾಡಲು ಪ್ರಯತ್ನಿಸಿದರು. ಸದ್ಯದ ಸ್ಥಿತಿಯಲ್ಲಿಯೂ ಕೂಡ ಹಿಂದೂ ಧರ್ಮದ ಮೇಲೆ ನಿರಂತರ ಆಘಾತ ನಡೆಯುತ್ತಿದೆ. ವಕ್ಫ್ ಕಾಯ್ದೆ, ಲವ್ ಜಿಹಾದ್ ನಂತಹ ಸಮಸ್ಯೆಗಳನ್ನು ಹಿಂದೂಗಳು ಎದುರಿಸಬೇಕಾಗಿದೆ. ಧರ್ಮ ಉಳಿದರೆ ರಾಷ್ಟ್ರ ಉಳಿಯುವುದು, ರಾಷ್ಟ್ರ ಉಳಿದರೆ ನಾವು ಉಳಿಯಲು ಸಾಧ್ಯ ಇದನ್ನು ಅರಿತುಕೊಳ್ಳುವ ಅವಶ್ಯಕತೆ ಇದೆ. ಹಿಂದೂ ರಾಷ್ಟ್ರ ಸಧ್ಯದ ಕಾಲದ ಅವಶ್ಯಕತೆಯಾಗಿದೆ. ಹಿಂದೂ ರಾಷ್ಟ್ರ ನಮಗೆ ಯಾರೂ ಉಡುಗೊರೆಯಾಗಿ ಕೊಡುವುದಿಲ್ಲ. ಇದಕ್ಕಾಗಿ ಸಂಘರ್ಷ ಮಾಡಿ ಪಡೆಯಬೇಕಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಸರ್ವಸ್ವವನ್ನು ತ್ಯಾಗ ಮಾಡಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಬಹುಸಂಖ್ಯಾತ ಇರುವ ಹಿಂದೂಗಳು ಶಿವಾಜಿಯವರನ್ನು ಆದರ್ಶ ಇಟ್ಟುಕೊಂಡು ಪ್ರತಿದಿನ ಒಂದು ಗಂಟೆಯಾದರೂ ರಾಷ್ಟ್ರ ಮತ್ತು ಧರ್ಮಕ್ಕಾಗಿ ತನು, ಮನ, ಧನದ ತ್ಯಾಗ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯಶ್ರೀ.ವಿಜಯ್ ರೇವಣಕರ್ ಇವರು ಕರೆ ನೀಡಿದರು. ಈ ಸಂದರ್ಭದಲ್ಲಿ ಆನಂದಪುರ, ಸುತ್ತ ಮುತ್ತಲಿನ ಹಿಂದುತ್ವ ನಿಷ್ಠರು ಹಿಂದೂ ಮುಖಂಡರು ಸೇರಿದಂತೆ ೨೨೦ ಕ್ಕೂ ಹೆಚ್ಚು ಧರ್ಮಭಿಮಾನಿಗಳು ಉಪಸ್ಥಿತರಿದ್ದರು.