ಸುದ್ದಿ ಕನ್ನಡ ವಾರ್ತೆ
ಸಾಗರ: ಅಡಕೆ ತೇವಾಂಶವು ಮಲೆನಾಡು ಭಾಗದಲ್ಲಿ ಕನಿಷ್ಠ ಶೇ. ೧೧ ಇರುತ್ತದೆ. ಎಫ್‌ಎಸ್‌ಎಸ್‌ಎ ಶೇ. ೭ ಎಂದು ನಿಗದಿಪಡಿಸಿದೆ. ಹಾಗಾಗಿ ಇಲ್ಲಿಂದ ಕಳುಹಿಸಲ್ಪಟ್ಟ ನೂರಾರು ಅಡಿಕೆ ಲೋಡ್‌ಗಳು ತೇವಾಂಶ ಹೆಚ್ಚಾಗಿದೆ ಎಂದು ತಿರಸ್ಕರಿಸಲ್ಪಡುತ್ತಿದೆ. ಹಾಗಾಗಿ ಶೇಕಡಾ ೭ ರಿಂದ ೧೧ ತೇವಾಂಶಕ್ಕೆ ಹೆಚ್ಚಿಸಲು ಆದೇಶಿಸಬೇಕು ಹಾಗೂ ಕೇಂದ್ರ ಸರ್ಕಾರ ಅಡಕೆ ಆಮದು ಸುಂಕವನ್ನು ೩೫೨ ರೂ.ನಿಂದ ೪೫೨ ರೂ.ಗೆ ಹೆಚ್ಚಿಸಿ, ದೇಸಿ ಅಡಕೆ ಬೆಳೆಗಾರರನ್ನು ರಕ್ಷಿಸಬೇಕು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್‌ಸಿಂಗ್ ಚೌವ್ಹಾಣ್ ಅವರಿಗೆ ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ ಮನವಿ ಮಾಡಿಕೊಂಡಿದೆ.

ನಗರದ ಇಂದಿರಾಗಾಂಧಿ ಕಾಲೇಜಿನ ಎದುರಿನ ಸಂತೆ ಮೈದಾನದ ದಿ. ಎಲ್.ಟಿ.ತಿಮ್ಮಪ್ಪ ಹೆಗಡೆ ವೇದಿಕೆಯಲ್ಲಿ ಸಾಗರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ ಇಲ್ಲಿನ ಆಪ್ಸ್‌ಕೋಸ್ ಹಾಗೂ ತೋಟಗಾರ‍್ಸ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಅಡಕೆ ಬೆಳೆಗಾರರ ಬೃಹತ್ ಸಮಾವೇಶದ ಸಂದರ್ಭದಲ್ಲಿ ಮನವಿ ಸಲ್ಲಿಸಿದ ಅಡಕೆ ಬೆಳೆಗಾರರ ಸಂಘ, ಅಡಕೆ ಆರೋಗ್ಯಕ್ಕೆ ಹಾನಿಕಾರಕ ಕ್ಯಾನ್ಸರ್‌ಕಾರಕ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ಇದೆ. ಅಡಕೆ ಹಾನಿಹಾರಕ ಅಲ್ಲ ಎಂದು ನ್ಯಾಯಾಲಯ ಒಪ್ಪುವ ಸಂಶೋಧನ ಸಂಸ್ಥೆಯಿಂದ, ಸರ್ಕಾರ ಸಂಶೋಧನೆ ನಡೆಸಿ, ಕಾಲಮಿತಿ ಒಳಗೆ ಆ ಸಂಶೋಧನಾ ವರದಿಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಮಲೆನಾಡು ಭಾಗದಲ್ಲಿ ಎಲೆ ಚುಕ್ಕೆರೋಗ ವ್ಯಾಪಕವಾಗಿ ಹರಡುತ್ತ ಇದೆ. ಈ ಕುರಿತು ಐಸಿಎಆರ್‌ನಲ್ಲಿ ಸಂಶೋಧನೆ ಮಾಡಿ ಪರಿಹಾರ ಒದಗಿಸಬೇಕು.

ಸೊಪ್ಪಿನಬೆಟ್ಟ, ಕಾನುಗಳನ್ನು ಬೆಳೆಗಾರರು ಪರಂಪರಾಗತವಾಗಿ ರಕ್ಷಣೆ ಮಾಡಿಕೊಂಡು ಬರುತ್ತಿದ್ದು, ಮಣ್ಣು ಬಳಕೆಗೆ ಮತ್ತು ಸೊಪ್ಪು ಬಳಕೆಗೆ ಕಾನೂನು ರೀತಿಯ ಅವಕಾಶ ಮಾಡಿಕೊಡಬೇಕು ಮತ್ತು ಸೊಪ್ಪಿನ ಬೆಟ್ಟದ ಹಕ್ಕನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿರುವಂತೆ ಶಿವಮೊಗ್ಗಕ್ಕೂ ವಿಸ್ತರಿಸುವುದು ಮತ್ತು ಪರಿಭಾವಿತ ಅರಣ್ಯ ಎಂಬ ಪಟ್ಟಿಯಿಂದ ಕಾನು, ಸೊಪ್ಪಿನ ಬೆಟ್ಟವನ್ನು ಕೈ ಬಿಡಬೇಕೆಂದು ಒತ್ತಾಯಿಸಿದೆ.

ಗೋರಕ್ ಸಿಂಗ್ ವರದಿಯನ್ನು ಯಥಾವತ್ತು ಜಾರಿ ಹಾಗೂ ಅಡಿಕೆಗೆ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ಮೊತ್ತವನ್ನು ದ್ವಿಗುಣಗೊಳಿಸುವಂತೆ ಕ್ರಮ, ರಾಷ್ಟ್ರಮಟ್ಟದ ಅಡಿಕೆ ಸಂಶೋಧನಾ ಕೇಂದ್ರವನ್ನು ಸಾಗರದಲ್ಲಿ ಸ್ಥಾಪಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ವಿದೇಶದಿಂದ ಕಳಪೆ ಗುಣಮಟ್ಟದ ಅಡಿಕೆ ಕಳ್ಳ ಮಾರ್ಗದಿಂದ, ಗಡಿ ಮತ್ತು ಬಂದರುಗಳಿಂದ ಅಕ್ರಮವಾಗಿ ಸಾವಿರಾರು ಟನ್ ಪ್ರವೇಶಿಸುತ್ತಿದೆ. ದೇಸಿ ಮಾರುಕಟ್ಟೆ ಮೇಲೆ ದುಷ್ಪರಿಣಾಮ ಬೀರಿದೆ ಆದ್ದರಿಂದ ತಡೆಗಟ್ಟಲು ಕ್ರಮವಹಿಸಬೇಕು.

ಮೈಲುತುತ್ತಕ್ಕೆ ಹಾಕಿರುವ ಶೇ. ೧೮ರ ಜಿಎಸ್‌ಟಿಯನ್ನು ೫ಕ್ಕೆ ಇಳಿಸಲು ಕ್ರಮ ವಹಿಸಬೇಕು. ಮಲೆನಾಡು ಭಾಗದಲ್ಲಿ ಮಂಗ ಮತ್ತು ಕಾಡುಕೋಣಗಳು ಹಾಗೂ ಇತರೆ ಕಾಡು ಪ್ರಾಣಿಗಳಿಂದ ವ್ಯಾಪಕವಾಗಿ ಬೆಳೆ ಮತ್ತು ಫಸಲವನ್ನು ಹಾನಿ ಮಾಡಿ, ತೀವ್ರ ನಷ್ಟ ಉಂಟಾಗುತ್ತಿರುವುದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ.