ಸುದ್ದಿ ಕನ್ನಡ ವಾರ್ತೆ
ಶಿರಸಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ನಡೆದ ರಾಜ್ಯಮಟ್ಟದ ಸಂಸ್ಕೃತ ಶಾಸ್ತ್ರೀಯ ಸ್ಪರ್ಧೆಗಳಲ್ಲಿ ಸ್ವರ್ಣವಲ್ಲಿಯ ಮಹಾ ಸಂಸ್ಥಾನದ ವಿದ್ಯಾರ್ಥಿಗಳು ವಿಶಿಷ್ಟ ಸಾಧನೆಗಳನ್ನು ಮಾಡಿದ್ದಾರೆ.
ಸಂಸ್ಥಾನ ನಡೆಸುವ ಶ್ರೀರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಾದ ನಾಗರಾಜ ಭಟ್ಟ ಗಂಗೆಮನೆ ಧರ್ಮಶಾಸ್ತ್ರದ ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದು ಹರಿದ್ವಾರದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಗಾಂಧೀಜಿಯವರ ಜೀವನದಲ್ಲಿ ಭಗವದ್ಗೀತೆಯ ಪಾತ್ರ ಎಂಬ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಅಕ್ಷಯ ಭಟ್ಟ ಶಿರಸಿ ವೇದಾಂತ ಭಾಷಣದಲ್ಲಿ ತೃತೀಯ ಬಹುಮಾನ ಹಾಗೂ ಗಾಂಧೀಜಿಯವರ ದೃಷ್ಟಿಕೋನದಲ್ಲಿ ಸಂಸ್ಕೃತ ಮತ್ತು ಸಂಸ್ಕೃತಿ ಎಂಬ ವಿಷಯದ ಭಾಷಣದಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಅಭಿಷೇಕ ಭಟ್ಟ ಮತ್ತು ಪ್ರಬೋಧ ಶಾಸ್ತ್ರೀ ಉಪನಿಷತ್ ಕಂಠಪಾಠದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಪ್ರಾಧ್ಯಾಪಕ ಡಾ. ವಿನಾಯಕ ಭಟ್ಟ ಗುಂಜಗೋಡು ಇವರು ಮಾರ್ಗದರ್ಶಕರಾಗಿದ್ದರು. ವಿದ್ಯಾರ್ಥಿಗಳ ಈ ವಿಶೇಷ ಸಾಧನೆಗೆ ಸ್ವರ್ಣವಲ್ಲಿ ಮಠದ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು, ಕಿರಿಯ ಶ್ರೀಗಳಾದ ಶ್ರೀಆನಂದ ಬೊಧೇಂದ್ರ ಸರಸ್ವತೀ ಸ್ವಾಮೀಜಿಗಳು, ಆಡಳಿತ ಮಂಡಳಿಯ ಪದಾಧಿಕಾರಿಗಳು, ಪ್ರಾಚಾರ್ಯರು, ಅಧ್ಯಾಪಕ ವೃಂದದವರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.