ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜಧಾನಿ ಪಣಜಿ ಮಹಾನಗರದಲ್ಲಿ ಸ್ಮಾರ್ಟ್ ಸಿಟಿಯಡಿ ಬಾಕಿ ಉಳಿದಿರುವ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ಇದರ ಪ್ರಕಾರ ವಿಶಾಲ್ ಮೆಗಾಮಾರ್ಟ್, ಹಳೆ ಶಿಕ್ಷಣ ನಿರ್ದೇಶನಾಲಯ ಮತ್ತಿತರ ಭಾಗಶಃ ಕಾಮಗಾರಿಗಳು ನಡೆಯುತ್ತಿವೆ. ಇದರಿಂದ ಪಣಜಿಗರು ಮತ್ತೊಮ್ಮೆ ಧೂಳಿನ ಮಾಲಿನ್ಯಕ್ಕೆ ತುತ್ತಾಗಿದ್ದಾರೆ. ಕಾಮಗಾರಿಯಿಂದ ರಸ್ತೆಗಳು ಕಿರಿದಾಗಿವೆ. ಇಲ್ಲಿ ಟ್ರಾಫಿಕ್ ನಿಯಂತ್ರಿಸಲು ಪೆÇಲೀಸರಿಲ್ಲದ ಕಾರಣ ಟ್ರಾಫಿಕ್ ಜಾಮ್ ಕೂಡ ಆಗಿದೆ.
ಪಣಜಿ ಸ್ಮಾರ್ಟ್ ಸಿಟಿಯ ಕಾಮಗಾರಿಗಳ ಅವಧಿ ಮಾರ್ಚ್ 31, 2025ಕ್ಕೆ ಕೊನೆಗೊಳ್ಳಲಿದೆ. ಪ್ರಸ್ತುತ ಏಟೀನ್ ಜೂನ್ ರಸ್ತೆಯಲ್ಲಿರುವ ಕಾಕುಲೋ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂಭಾಗದ ಫುಟ್‍ಪಾತ್, ಪಬ್ಲಿಕ್ ಕೆಫೆಯಿಂದ ಮಾರುಕಟ್ಟೆಗೆ ಹೋಗುವ ರಸ್ತೆ, ಡಾನ್‍ಬಾಸ್ಕೋದಿಂದ ಪೆಟ್ರೋಲ್ ಪಂಪ್‍ಗೆ ಹೋಗುವ ರಸ್ತೆ, ವುಡ್‍ಲ್ಯಾಂಡ್ ಶೋರೂಂ ಬಳಿಯ ರಸ್ತೆಯಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ.
ಈ ಪೈಕಿ ಕೆಲವೆಡೆ ಫುಟ್‍ಪಾತ್ ಹಾಕುವ ಕೆಲಸ ನಡೆಯುತ್ತಿದೆ. ಈ ಕಾರ್ಯಕ್ಕೆ ದೊಡ್ಡ ಯಂತ್ರಗಳನ್ನು ಬಳಸುವುದರಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಕೆಲವೆಡೆ ಸ್ಮಾರ್ಟ್ ಸಿಟಿ ಅಡಿಯಲ್ಲಿ ಹಾಕಲಾಗಿರುವ ಹೊಸ ಚರಂಡಿಗೆ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗಾಗಿ ರಸ್ತೆಗಳನ್ನು ಅಗೆದು ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ಈ ಪ್ರದೇಶಗಳಲ್ಲಿನ ವಾಣಿಜ್ಯ ಸಂಸ್ಥೆಗಳೂ ಧೂಳಿನ ಮಾಲಿನ್ಯದಿಂದ ಬಳಲುತ್ತಿವೆ.