ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಅಡಿಕೆ ತೋಟದಲ್ಲಿ ಕೆಲಸ ಮಾಡಿದ್ದ ಕೂಲಿ ಹಣ ಕೇಳಲು ಹೋಗಿದ್ದ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಗುಳ್ಳಾಪುರದಲ್ಲಿ ನಡೆದಿದೆ. ಈ ಘಟನೆಯಲ್ಲಿ ಕಾರ್ಮಿಕನ ಕೈಗೆ ಗುಂಡು ತಗುಲಿ ಗಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಕೆಲದಿನಗಳ ಹಿಂದೆ ಗುಳ್ಳಾಪುರದ ಸುಬ್ರಮಣ್ಯ ಗಾವ್ಕರ್ ಎಂಬುವರ ಮನೆಗೆ ನಾಗರಾಜ್ ಬಾಂಧೇಕರ್ ಎಂಬುವವರು ತೋಟದ ಕೆಲಸಕ್ಕೆ ಹೋಗಿದ್ದರು. ಕೆಲಸದ ಬಾಕಿ ಹಣವನ್ನು ಪಡೆಯಲು ಅವರು ನವೆಂಬರ್ 28ರಂದು ಗಾವ್ಕರ್ ರವರ ಮನೆಗೆ ಹೋಗಿದ್ದರು. ಆದರೆ ನೀನು ಕೆಲಸ ಸರಿಯಾಗಿ ಮಾಡಿಲ್ಲ ಎಂದು ಗಾವ್ಕರ್ ರವರು ಕಾರ್ಮಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎನ್ನಲಾಗಿದೆ.
ನಂತರ ಕಾರ್ಮಿಕ ನಾಗರಾಜ್ ಬಾಂಧೇಕರ್ ರವರ ಮೇಲೆ ಗುರಿಯಿಟ್ಟು ಏರ್ ಗನ್ ನಿಂದ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯಲ್ಲಿ ನಾಗರಾಜ್ ಬಾಂಧೇಕರ್ ರವರ ಕೈ ಬೆರಳಿಗೆ ಗುಂಡು ತಗಲಿ ಗಾಯವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
