ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಸದ್ಯ ಅಡಿಕೆ ಕೊಯ್ಲು ಆರಂಭಗೊಂಡಿದೆ. ಇದರಿಂದಾಗಿ ತಾಲೂಕು ಹೊರತುಪಡಿಸಿ ಇತರ ಭಾಗಗಳಿಂದಲೂ ಕೆಲಸಕ್ಕೆ ಕಾರ್ಮಿಕರು ಬರುತ್ತಾರೆ. ಇತ್ತೀಚಿಗೆ ನಡೆಯುತ್ತಿರುವ ಘಟನೆಯಿಂದಾಗಿ ಅಪರಿಚಿತರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಕೂಡ ರೈತರು ಭಯಪಡುವಂತಾಗಿದೆ.
ಕೃಷಿ ಕೆಲಸ ಎಂದ ಕೂಡಲೇ ಇದು ಒಬ್ಬರಿಂದ ಇಬ್ಬರಿಂದ ಆಗುವ ಅಂತ ಕೆಲಸವಲ್ಲ. ಸಹಜವಾಗಿಯೇ ಆಳು ಕಾಳು ಹೆಚ್ಚಾಗಿ ಬೇಕು. ಅಡಿಕೆ ಕೊಯ್ಲು ಎಂದ ಕೂಡಲೇ ಅಡಿಕೆ ಮರ ಏರಲು, ಕೊನೆ ಹಿಡಿಯಲು , ತೋಟದಿಂದ ಮನೆಗೆ ಅಡಿಕೆ ಹೊತ್ತು ತರಲು ಕಾರ್ಮಿಕರ ಅಗತ್ಯ ಇದ್ದೇ ಇರುತ್ತದೆ. ಒಂದು ವೇಳೆ ಆಧುನಿಕ ಪದ್ಧತಿ ದೋಟಿ ಯಲ್ಲಿ ಕೊನೆ ಕೊಯ್ದರು ಕೂಡ ಅಡಿಕೆ ತೋಟದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಅಡಿಕೆಯನ್ನು ಒಂದೆಡೆ ಸೇರಿಸಿ ಮನೆಗೆ ಹೊತ್ತು ತರಲು ಜನ ಬೇಕೇ ಬೇಕು.
ಸದ್ಯ ಸ್ಥಳೀಯವಾಗಿ ಕೆಲಸಕ್ಕೆ ಬರುವ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದೆ. ಇದರಿಂದಾಗಿ ಅನಿವಾರ್ಯವಾಗಿ ಹೊರಭಾಗದಿಂದ ಬರುವ ಕಾರ್ಮಿಕರನ್ನು ಅವಲಂಬಿಸುವ ಅನಿವಾರ್ಯತೆ ಎದುರಾಗಿದೆ.
ಇತ್ತೀಚೆಗೆ ನಡೆಯುತ್ತಿರುವ ಕಳ್ಳತನ ಪ್ರಕರಣಗಳು ಯಾರನ್ನು ನಂಬುವುದು ಯಾರನ್ನು ಬಿಡುವುದು…? ಎಂದು ಕೃಷಿಕರು ಗೊಂದಲಕ್ಕೆ ಬೀಳುವಂತಾಗಿದೆ.
ಪೇಟೆಯಲ್ಲಿ ಇರುವ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು…
ಪೇಟೆಯಲ್ಲಿ ಒಂದು ಮನೆ ಬಾಡಿಗೆ ಪಡೆದುಕೊಳ್ಳಬೇಕಾದರೆ ಅವರಿಂದ ಅಗತ್ಯ ದಾಖಲಾತಿಯನ್ನು ಪಡೆದು, ಪೊಲೀಸ್ ವೆರಿಫಿಕೇಶನ್ ಮಾಡಿಸಿಕೊಂಡ ನಂತರವೇ ಅವರಿಗೆ ಬಾಡಿಗೆಗೆ ಮನೆ ಕೊಡಲಾಗುತ್ತದೆ. ಇದೇ ರೀತಿ ಹಳ್ಳಿಗಳಲ್ಲಿಯೂ ಕೂಡ ಹೊರಭಾಗದಿಂದ ಯಾರೇ ಕೆಲಸಕ್ಕೆ ಬಂದರೂ ಕೂಡ ಅವರ ಆಧಾರ್ ಕಾರ್ಡ್, ಅವರ ಮತದಾರ ಗುರುತಿನ ಚೀಟಿ, ಅವರ ಭಾವಚಿತ್ರ, ಇವುಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳುವ ಪದ್ಧತಿ ರೂಢಿಗೆ ಬರಲೇಬೇಕಿದೆ. ಇದರಿಂದಾಗಿ ಒಂದು ಅಪರಾಧ ಪ್ರಕರಣ ನಡೆದಾಗ ಅಪರಾಧಿಯನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಹೆಚ್ಚು ಸುಲಭವಾಗಲಿದೆ. ಹೀಗೆ ಮಾಡಿದಾಗ ಇಂತಹ ಅಪರಾಧ ಕೃತ್ಯ ಎಸೆಗಲ್ಲು ಕೂಡ ಭಯ ಪಡುತ್ತಾರೆ.
ಸಿಸಿಟಿವಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಲೇಬೇಕು…
ಈಗ ಆಧುನಿಕತೆ ಎಷ್ಟು ಮುಂದುವರಿದಿದೆ ಎಂದರೆ ನಾವು ಎಲ್ಲಿಯೇ ಇದ್ದರೂ ಮನೆ ಮತ್ತು ತೋಟದ ಸುತ್ತಮುತ್ತಲು ಲೈವ್ ವೀಕ್ಷಣೆ ಮಾಡಬಹುದು. ಮನೆಯ ಸುತ್ತ ಹಾಗೂ ತೋಟದ ಸುತ್ತ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಅದಕ್ಕೆ ಇಂಟರ್ನೆಟ್ ಸೌಲಭ್ಯ ಕಲ್ಪಿಸಿದರೆ ನಮ್ಮ ಮೊಬೈಲ್ ನಲ್ಲಿಯೇ ನಾವು ಎಲ್ಲಿಯೇ ಇದ್ದರೂ ಮನೆ ಹಾಗೂ ತೋಟದ ಸುತ್ತ ದೃಶ್ಯಾವಳಿಗಳನ್ನು ನೇರವಾಗಿ ವೀಕ್ಷಿಸಬಹುದಾಗಿದೆ. ಇದು ಭದ್ರತಾ ದೃಷ್ಟಿಯಿಂದ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಕೃಷಿಕರು ಅಳವಡಿಸಿಕೊಳ್ಳಲೇ ಬೇಕಿದೆ.
ಊರಿಗೆ ಯಾರೇ ಹೊಸಬರು ಬಂದರು, ಅವರ ಬಗ್ಗೆ ನಿಗಾ ಇರಲಿ….
ಹಳ್ಳಿಯಿಂದ ಕೂಡಲೆ ಒಂದೈ ಮನೆಯಿಂದ ಮತ್ತೊಂದು ಮನೆ ಕಿಲೋಮೀಟರ್ಗಟ್ಟಲೆ ಅಂತರದಲ್ಲಿರುತ್ತದೆ. ಇದರಿಂದಾಗಿ ಹಳ್ಳಿಗೆ ಯಾರೇ ಪ್ರವೇಶವಾದರೂ ಅವರ ಬಗ್ಗೆ ಕೊಂಚ ಗಮನ ಹರಿಸುವುದು ಸೂಕ್ತ.
ಇತ್ತೀಚಿಗೆ ನಡೆಯುತ್ತಿರುವ ಕಳ್ಳತನ ಪ್ರಕರಣಗಳು ಹಳ್ಳಿಗರ ನಿದ್ದೆಗೆಡಿಸಿವೆ. ಇಂತಹ ಘಟನೆ ಮರುಕಳಿಸಿದಂತೆ ಪೊಲೀಸ್ ಇಲಾಖೆ ಮುಖೇನವಾಗಿ ಪ್ರತಿ ಮನೆಗೆ ಬರುವ ಕಾರ್ಮಿಕರ ದಾಖಲಾತಿ ಪಡೆದುಕೊಳ್ಳುವಂತೆ ಅಧಿಕೃತ ಆದೇಶ ಹೊರಡಿಸಿದರೆ ಇಂತಹ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಹೆಚ್ಚು ಅನುಕೂಲವಾಗಲಿದೆ ಅಲ್ಲವೇ…?
