ಸುದ್ದಿ ಕನ್ನಡ ವಾರ್ತೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಖನಿಜ ಸಂಪತ್ತನ್ನು ಹುಡುಕಲು ವೈಮಾನಿಕ ಸಮೀಕ್ಷೆ ನಡೆಯುತ್ತಿರುವುದು ಇದೀಗ ಜಿಲ್ಲೆಯ ಜನರ ನಿದ್ದೆಗೆಡಿಸಿದೆ.

ಗುರುವಾರ ನವೆಂಬರ್ ಐದರಂದು ಬೆಳಗಿನಿಂದ ಮಧ್ಯಾಹ್ನದವರೆಗೆ ಬಿಸಲಕೊಪ್ಪ, ಬೆಡಸಗಾಂ, ಮತ್ತು ಮಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಮಾನ ಒಂದು ಅತ್ಯಂತ ಕಡಿಮೆ ಎತ್ತರದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸತತವಾಗಿ ಹಾರಾಟ ನಡೆಸಿದೆ. ಏಕಾಏಕಿ ನಡೆದ ಈ ವಿಮಾನ ಹಾರಾಟದಿಂದ ಸ್ಥಳೀಯ ಸಾರ್ವಜನಿಕರಲ್ಲಿ ತೀವ್ರ ಆತಂಕ ಹಾಗೂ ಭಯದ ವಾತಾವರಣ ನಿರ್ಮಾಣವಾಗಿದೆ.

ಆದರೆ ಈ ವಿಮಾನ ಹಾರಾಟದ ಕುರಿತು ವಿಜ್ಞಾನಿಗಳು ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಂದ ಲಭಿಸಿದ ಅಧಿಕೃತ ಮಾಹಿತಿಯ ಪ್ರಕಾರ – ಕೇಂದ್ರ ಸರ್ಕಾರದ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಂಸ್ಥೆಯು ನ್ಯಾಷನಲ್ ಏರ್ ಬೋರ್ನ್ ಜಿಯೋ ಫಿಸಿಕಲ್ ಮ್ಯಾಪಿಂಗ್ ಪ್ರೋಗ್ರಾಮ್ ಈ ಯೋಜನೆಯ ಅಡಿಯಲ್ಲಿ ವೈಮಾನಿಕ ಸಮೀಕ್ಷೆಯನ್ನು ಕೈಗೆತ್ತಿಕೊಂಡಿದೆ ಎನ್ನಲಾಗಿದೆ.

ಆಸ್ಟ್ರೇಲಿಯಾದ ಕಂಪನಿಗೆ ಸೇರಿದ ಅತ್ಯಂತ ಕೆಳಮಟ್ಟದಲ್ಲಿ ಹಾರುವ ವಿಶೇಷ ಸಾಮರ್ಥ್ಯ ಹಾಗೂ ಸುಧಾರಿತ ಸರ್ವೆ ತಂತ್ರಜ್ಞಾನ ಹೊಂದಿರುವ ವಿಮಾನವನ್ನು ಇದಕ್ಕೆ ಬಳಸಲಾಗುತ್ತಿದೆ.

ಈ ಭಾಗದಲ್ಲಿ ಬೆಟ್ಟಗುಡ್ಡ ಹಾಗೂ ಅರಣ್ಯ ಪ್ರದೇಶಗಳಲ್ಲಿ ಅಡಗಿರುವ ವಿವಿಧ ರೀತಿಯ ಖನಿಜ ಸಂಪತ್ತು ಮತ್ತು ಅದಿರುಗಳ ಪ್ರಮಾಣವನ್ನು ನಿಖರವಾಗಿ ಗುರುತಿಸಿ ಸರ್ವೇ ಮಾಡುವುದು ಈ ವೈಮಾನಿಕ ಹಾರಾಟದ ಮುಖ್ಯ ಉದ್ದೇಶವಾಗಿದೆ ಎಂಬುದು ಜನತೆ ಇನ್ನಷ್ಟು ಆತಂಕ ಪಡುವ ವಿಷಯವಾಗಿದೆ.

ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಜನತೆ ಜನ ವಿರೋಧಿ ಮತ್ತು ಪರಿಸರ ವಿರೋಧಿ ಯೋಜನೆಗಳಿಂದ ತೀರ ಆತಂಕಕ್ಕೆ ಒಳಗಾಗಿದ್ದಾರೆ . ಆದರೆ ಉತ್ತರ ಕನ್ನಡದ ವಿವಿಧ ಭಾಗಗಳಲ್ಲಿ ಖನಿಜ ಸಂಪತ್ತನ್ನು ಹುಡುಕಲು ಈ ವೈಮಾನಿಕ ಸಮೀಕ್ಷೆ ನಡೆಸುತ್ತಿರುವುದು ಇನ್ನಷ್ಟು ಆತಂಕದ ವಿಷಯವಾಗಿದೆ. ಒಂದು ವೇಳೆ ಈ ಭಾಗದಲ್ಲಿ ಸರ್ವೆ ನಡೆಸಿದಾಗ ಖನಿಜ ಸಂಪತ್ತು ಹೇರಳವಾಗಿ ಕಂಡು ಬಂದರೆ ಭಾರಿ ಪ್ರಮಾಣದ ಗಣಿಗಾರಿಕೆಗಳ ಆರಂಭಕ್ಕೆ ಮುಂದಾದರೂ ಆಶ್ಚರ್ಯವಿಲ್ಲ.