ಸುದ್ದಿ ಕನ್ನಡ ವಾರ್ತೆ

ಪಣಜಿ: ಪರ್ವರಿಯಿಂದ ಮಾಂಡವಿ ಹೊಸ ಸೇತುವೆಯ ಮೇಲೆ ವೇಗವಾಗಿ ಬಂದ ಪ್ರವಾಸಿ ಟ್ಯಾಕ್ಸಿ ಕಾರು ಓವರ್ ಟೇಕ್ ಮಾಡುವಾಗ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಸೋಮವಾರ ಬೆಳಗಿನ ಜಾವ ಸಂಭವಿಸಿದೆ.

ಈ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲ ಪ್ರಯಾಣಿಸುತ್ತಿದ್ದ ಕುಶಾಗ್ರ ಪಟಾಲೆ (21, ಮುಂಬಯಿ), ಯಶ್ ಮಲಿಕ್ (20, ಹರಿಯಾಣ) ಎಂಬ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೃತ ಇಬ್ಬರು ವಿದ್ಯಾರ್ಥಿಗಳು ಗೋವಾದ ಮುರ್ಗಾಂವ್ ಕಾನೂನು ಕಾಲೇಜಿನಲ್ಲಿ ಓದುತ್ತಿದ್ದರು.

Banner Ad

ಸೋಮವಾರ ಬೆಳಗಿನ ಜಾವ 3.11 ರ ಸುಮಾರು ಈ ಭೀಕರ ಅಪಘಾತ ಸಂಭವಿಸಿದೆ. ವಿದ್ಯಾರ್ಥಿಗಳು ಎಮ್ ಎಚ್ 03, ಡಿಜೆಡ್-9651 ಸಂಖ್ಯೆಯ ಬೈಕ್ ನಲ್ಲಿ ಸಾಂಗಲ್ಡಾದಿಂದ ಪಣಜಿ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. ಸಂದರ್ಭದಲ್ಲಿ ಪ್ರವಾಸಿ ಟ್ಯಾಕ್ಸಿ ಚಾಲಕ ( ಜಿಎ- 03, ವಿ-2538 ಕ್ರಮಾಂಕದ ಎರ್ಟಿಗಾ ಕಾರು) ರಾಜಕುಮಾರ್ ಕಟ್ಟೀಮನಿ(ಕರ್ನಾಟಕ ನಿವಾಸಿ) ಕಾರಿನ ನಿಯಂತ್ರಣ ತಪ್ಪಿ ಮುಂಭಾಗದಲ್ಲಿ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಇಬ್ಬರೂ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಪರ್ವರಿ ಪೋಲಿಸ್ ಸಬ್ ಇನ್ಸಪೆಕ್ಟರ್ ಸೀತಾರಾಮ್ ಮಲಿಕ್ ತಮ್ಮ ಸಹೋದ್ಯೋಗಿಗಳೊಂದಿಗೆ ಧಾವಿಸಿ ಪಂಚನಾಮೆ ನಡೆಸಿ ಟ್ಯಾಕ್ಸಿ ಚಾಲಕನನ್ನು ಬಂಧಿಸಿದ್ದಾರೆ.