ಇತ್ತೀಚೆಗೆ ನಾನು ಓದಿದ ಪುಸ್ತಕಗಳಲ್ಲಿ ನನ್ನೊಳಗೊಂದು ಸಂಚಲನವನ್ನು ಮೂಡಿಸಿದ ಕೃತಿಯೆಂದರೆ ಅದು ಸ. ರಾ. ಸುಳಕೂಡೆ ಯವರು ಬರೆದ’ ಸಮಾಧಾನ ‘ ಎನ್ನುವ ಕೃತಿ. ಒಂದು ಪುಸ್ತಕವನ್ನು ಓದಿ ಮುಗಿಸಿದ ನಂತರ ನಡೆವ ಹೆಜ್ಜೆ ಹೆಜ್ಜೆಗೂ ಮಾರ್ಗದರ್ಶನ ನೀಡತಕ್ಕಂಥ ಅಂಶಗಳು ಈ ಕೃತಿಯಲ್ಲಿದೆ. ಬದುಕು ಎಂದರೇನು?ಎನ್ನುವ ಬಗ್ಗೆ ವೈಚಾರಿಕ ಮನೋಭಾವವನ್ನು ಮೂಡಿಸುವ ಕೃತಿ ಎಂದರೆ ಅದು ‘ಸಮಾಧಾನ ‘. ನನ್ನ ಬದುಕು ಹೀಗೇ ಇರಬೇಕು ಎನ್ನುವ ಒಂದು ಸಾರ್ವತ್ರಿಕ ಪ್ರತಿಜ್ಞೆಯನ್ನು ಮನಪೂರ್ವಕವಾಗಿ ಸ್ವೀಕರಿಸಲು ನಮ್ಮನ್ನು ಅಣಿಗೊಳಿಸುವ ಕೃತಿಯಿದು.
ಜೀವನದ ವಿವಿಧ ಆಯಾಮಗಳು ಹೇಗಿದ್ದರೆ ಚೆನ್ನ? ಎಂಬ ಮೌಲ್ಯವನ್ನು ಸಾರುವ 25 ಪ್ರಬುದ್ಧ ಲೇಖನಗಳು ಈ ಕೃತಿಯಲ್ಲಿವೆ.ಪುಸ್ತಕವನ್ನು ತೆರೆದಿಟ್ಟ ಬಳಿಕ ಕೊನೆಯವರೆಗೂ ಓದಿಸಿಕೊಂಡು ಹೋದ ಹೆಗ್ಗಳಿಕೆ ಈ ಕೃತಿಯದ್ದು.
ನನ್ನ ಸಹೋದರರೊಬ್ಬರ ಸ್ಟೇಟಸ್ ನಲ್ಲಿ ‘ಸಮಾಧಾನ ‘ ಎನ್ನುವ ಕೃತಿ ಲೋಕಾರ್ಪಣೆಗೊಂಡ ಬಗೆಗಿನ ಒಂದು ಭಾವಚಿತ್ರ ನೋಡಿದೆ. ಕೃತಿಯ ಹೆಸರೇ ಅದನ್ನು ಓದಲೇ ಬೇಕೆಂಬ ಕುತೂಹಲವನ್ನು ನನ್ನಲ್ಲಿ ಹುಟ್ಟು ಹಾಕಿತ್ತು. ತಕ್ಷಣ ಲೇಖಕರ ಫೋನ್ ನಂಬರ್ ಸಂಗ್ರಹಿಸಿಕೊಂಡು ಅವರಿಗೊಂದು ಕರೆ ಮಾಡಿದೆ.ನಾನು ಯಾರೆಂದೇ ಗೊತ್ತಿಲ್ಲದಿದ್ದರೂ ನನ್ನಲ್ಲಿ ವಿಳಾಸವನ್ನು ಕೇಳಿ ಪುಸ್ತಕವನ್ನು ಕಳುಹಿಸಿಕೊಟ್ಟರು. (117) ನೂರ ಹದಿನೇಳು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಸಾರಸ್ವತ ಲೋಕಕ್ಕಿತ್ತ ಬಹುದೊಡ್ಡ ಸಾಹಿತಿ ನಾಲ್ಕಕ್ಷರ ಗೀಚುವ ನನ್ನಂಥವರ ಕರೆಗೆ ಓಗೊಟ್ಟು ಪುಸ್ತಕ ಕಳುಹಿಸಿಕೊಟ್ಟದ್ದೇ ಅವರ ಹೃದಯವಂತಿಕೆಗೆ ಸಾಕ್ಷಿ.
ಎತ್ತೆತ್ತಲೋ ಸಾಗುವ ಮನಸ್ಸನ್ನು ತಡೆದು ” ಇದು ಜೀವನದ ದಾರಿ” ಎನ್ನುವ ಸತ್ಪಥವನ್ನು ತೋರುವ, ಪಥದುದ್ದಕ್ಕೂ ಬೆಳಕನ್ನು ಚೆಲ್ಲುವ ಕೃತಿ ‘ಸಮಾಧಾನ ‘. ಮನುಷ್ಯ ಸ್ವಭಾವದ ಎಲ್ಲ ಚಿತ್ರಣಗಳನ್ನೂ ಹೃದಯಂಗಮವಾಗಿ ಚಿತ್ರಿಸುತ್ತಾ ಸಹಜ ಬದುಕಿನ ಕಡೆಗೆ ನಮ್ಮ ಮನವನ್ನು ಸೆಳೆಯುವಲ್ಲಿ ಸಫಲಗೊಂಡ ಕೃತಿಯಿದು.
ವಿಜ್ಞಾನ ತಂತ್ರಜ್ಞಾನ ನಾಗಾಲೋಟದಿಂದ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ ಮನುಷ್ಯ ಯಂತ್ರ ಮಾನವನೆನಿಸದೆ ಮನುಜನಾಗಿಯೇ ಬಾಳಬೇಕು ಎನ್ನುವ ಚಿಂತನೆಯನ್ನು ಈ ಕೃತಿ ನಮ್ಮೊಳಗೆ ಹುಟ್ಟು ಹಾಕುತ್ತದೆ. ಬದುಕಿನಲ್ಲಿ ಗುರಿ ಎಷ್ಟು ಮುಖ್ಯವೋ,ಆ ಗುರಿಯಡೆಗೆ ಸಾಗುವ ಪಥವೂ ಅಷ್ಟೇ ಮುಖ್ಯ ಎಂದು ಸಾರುವ ನಿರೀಕ್ಷೆ -ಪರೀಕ್ಷೆ ಎನ್ನುವ ಲೇಖನದಲ್ಲಿ ನಮ್ಮ ಆಶಯಗಳು ಕೈಗೂಡಬೇಕಾದರೆ ನಿಯತ್ತಿನ ಹಾದಿಯಲ್ಲಿಯೇ ಸಾಗಬೇಕು ಎನ್ನುವ ಕಿವಿ ಮಾತಿದೆ.” ಸಹಜಾನಂದಕ್ಕೆ ದೀರ್ಘಾಯುಷ್ಯವಿದೆ ” ಎನ್ನುವ ಮಾತಿನಂತೆ ನಾಟಕೀಯತೆಯ ಪರದೆ ಸರಿಸಿ ತಳುಕು ಬೆಳಕುಗಳಿಂದೀಚೆ ಒಂದು ವಾಸ್ತವತೆ ಇದೆ,ಅದೇ ನಮ್ಮ ಬದುಕು ಎಂಬ ಅರಿವನ್ನು ‘ವಾಸ್ತವತೆ ಮತ್ತು ಸಹಜಾನಂದ’ ಎನ್ನುವ ಲೇಖನ ಕಟ್ಟಿಕೊಡುತ್ತದೆ. ಇಡೀ ಜೀವ ಜಗತ್ತಿನ ಸಾರವಡಗಿರುವುದೇ ಪರಿಪಾಲನೆ ಎನ್ನುವ ಪದದಲ್ಲಿ. ಪ್ರಾಣಿ ವರ್ಗದಲ್ಲಿ ಉನ್ನತ ಸ್ತರದಲ್ಲಿರುವವನು ಮನುಷ್ಯ. ಆತನ ಜೀವನದಲ್ಲಿ ಪಾಲನೆ ಪೋಷಣೆ ಎನ್ನುವ ಪದಗಳಿಗೆ ಇರುವ ಮಹತ್ವವನ್ನು ವಿಶದಪಡಿಸುವ ಲೇಖನ ‘ಪರಿಪಾಲನೆ ‘. ಮನುಷ್ಯ ಜೀವನದುದ್ದಕ್ಕೂ ‘ಭಾವ ‘ ಎನ್ನುವ ಲಯ ಹರಿಯುತ್ತಲೇ ಇರಬೇಕು. ಆಗಲೇ ಪ್ರಾಣಿ ವರ್ಗದಲ್ಲಿ ನಾವು ಶ್ರೇಷ್ಠರೆನಿಸಲು ಸಾಧ್ಯ ಎನ್ನುವ ಅಂಶ ಈ ಲೇಖನದಲ್ಲಿದೆ.
ಮುಗ್ದತೆ, ಸಹೃದಯತೆ,ಎಲ್ಲಾ ಕರಗಿ ಹೋಗಿ ಹೊಡಿ,ಬಡಿ, ಕೊಲ್ಲು,ಎನ್ನುವ ವಿದ್ವಂಸಕ ನಡವಳಿಕೆಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಪ್ರಕೃತಿಯ ಮೂಲ ಧಾತುವೆನಿಸಿದ ಪ್ರೀತಿ ಮಮತೆ ವಾತ್ಸಲ್ಯದ ಅನಿವಾರ್ಯತೆಯನ್ನು ‘ವಾತ್ಸಲ್ಯ ‘ ಎನ್ನುವ ಲೇಖನದಲ್ಲಿ ಕೃತಿ ಕಾರರು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಮನುಷ್ಯ ಶಿಕ್ಷಣ ಕ್ಷೇತ್ರದಲ್ಲಿ,ಆರ್ಥಿಕ ವಲಯದಲ್ಲಿ,ಸಾಮಾಜಿಕ ಸ್ಥಾನಮಾನದಲ್ಲಿ ಬಹು ಎತ್ತರಕ್ಕೆ ಏರಿದ್ದರೂ ಕೂಡ ಆತನಿಗೆ ಇಂದು ‘ ನಿರಾಳತೆ ‘ ಎನ್ನುವುದು ಯಾಕೆ ದುರ್ಲಭವಾಗುತ್ತಿದೆ ಎನ್ನುವ ಬಗ್ಗೆ ಈ ಲೇಖನ ಓದುಗರ ಒಳಗಣ್ಣು ತೆರೆಸುತ್ತದೆ. ಹಣ, ಕೀರ್ತಿ, ಅಧಿಕಾರ ಇವೆಲ್ಲವುಗಳಾಚೆ ಬಹು ದೂರ ನಿಂತ ನಿರಾಳತೆ ನಮ್ಮಲ್ಲಿ ಮನೆ ಮಾಡಬೇಕಾದ ಅವಶ್ಯಕತೆ ಇಂದಿನ ದಿನಗಳಲ್ಲಿದೆ ಎನ್ನುವ ಲೇಖಕರ ಚಿಂತನೆ ನಿಜಕ್ಕೂ ಮನನ ಯೋಗ್ಯವಾದದ್ದು. ಶಿಕ್ಷಣ ರಂಗದಲ್ಲಿ ಹೆಚ್ಚು ಅಂಕ ಗಳಿಸಬೇಕು, ಉದ್ಯೋಗ ರಂಗದಲ್ಲಿ ಹೆಚ್ಚು ಹೆಚ್ಚು ಹಣ ಮಾಡಬೇಕು, ಸಾಮಾಜಿಕ ಸ್ಥಾನಮಾನಗಳು ಉನ್ನತ ಸ್ತರದಲ್ಲಿರಬೇಕು ಎಂದು ಬಯಸುವ ನಾವುಗಳು ಸಾರ ಸಜ್ಜನಿಕೆಯ ವ್ಯಕ್ತಿತ್ವ ನಮ್ಮದಾಗಬೇಕು ಎಂದೇಕೆ ಬಯಸುವುದಿಲ್ಲ? ಈ ಸೂಕ್ಷ್ಮವನ್ನು ಮರೆಯಬಾರದು ಎನ್ನುವ ಅರಿವನ್ನು ನೀಡುವ ಲೇಖನ ‘ಸಜ್ಜನಿಕೆ ಮತ್ತು ಸಂಪತ್ತು’. ಬದುಕು ಕಟ್ಟಿಕೊಳ್ಳುವ ದಾವಂತದಲ್ಲಿ ಮಾನವೀಯ ಮೌಲ್ಯಗಳು ಎಂದಿಗೂ ಮೂಲೆಗುಂಪಾಗಬಾರದು ಎಂಬುದನ್ನು ಕೃತಿಕಾರರು ಮನಮುಟ್ಟುವಂತೆ ವಿವರಿಸಿದ್ದಾರೆ. ಮಾತು ಮತ್ತು ನಡವಳಿಕೆ ಒಂದಕ್ಕೊಂದು ಪೂರಕವಾಗಿರಬೇಕು. ಅಂತೆಯೇ ನಮ್ಮ ಗ್ರಹಿಕೆ ಮತ್ತು ಗ್ರಹಿಸಿದ್ದನ್ನು ಕಾರ್ಯಗತಗೊಳಿಸುವ ಕ್ರಿಯಾಶೀಲತೆ ಎರಡೂ ಜೊತೆಯಾದಾಗ ಮಾತ್ರ ಒಂದು ಸಾಧನೆ ಸಾಧ್ಯ ಎನ್ನುವ ಕೃತಿಕಾರರ ಸಾಲುಗಳು ಕುಳಿತಲ್ಲೇ ಅರಮನೆ ಕಟ್ಟುವ ಮನೋಭಾವದ ಇಂದಿನ ಯುವ ಸಮೂಹಕ್ಕೆ ಉತ್ತಮ ಸಂದೇಶವನ್ನು ನೀಡುತ್ತದೆ.
ಸಂಬಳ, ಸಂಭಾವನೆ,ಅಧಿಕಾರ, ಮತ್ತು ಪ್ರಭಾವಕ್ಕಾಗಿ ಬದುಕುವ ಬದಲಾಗಿ ಪರಹಿತಕ್ಕಾಗಿ ಬದುಕುವ ಉದಾರತೆ ನಮ್ಮಲ್ಲಿ ಮೂಡಬೇಕು ಎನ್ನುವ ಲೇಖಕರ ಚಿಂತನೆ ಅನುಕರಣ ಯೋಗ್ಯವಾದದ್ದು. ‘ ಪರೋಪಕಾರಂ ಇದಂ ಶರೀರಂ ‘ ಎಂಬ ಧೋರಣೆಯನ್ನೇ ಪ್ರತಿಪಾದಿಸಿಕೊಂಡು ಧರ್ಮ ಶಾಲೆಗಳನ್ನು ಕಟ್ಟಿ ಅನ್ನದಾಸೋಹ,ಅಕ್ಷರ ದಾಸೋಹ ಇತ್ಯಾದಿಗಳನ್ನು ಮಾಡುತ್ತಾ ಜೀವನ ಸಾರ್ಥಕ ಗೊಳಿಸಿಕೊಂಡು ಅಮರರಾದ ಧೀಮಂತರ ಆದರ್ಶಗಳು ನಮಗೆ ದಾರಿದೀಪವಾಗಬೇಕು ಎನ್ನುವ ಲೇಖಕರ ಸಾಲುಗಳು ಸರ್ವಕಾಲಕ್ಕೂ ಅನ್ವಯವಾಗುವಂಥದ್ದು. ‘ ವಿದ್ಯಾ ದದಾತಿ ವಿನಯಂ ‘ ವಿದ್ಯೆ ವಿನಯಕ್ಕಾಗಿ ಎನ್ನುವ ಹಿರಿಯರ ಉಪದೇಶದ ಸಾರ ಸತ್ವ ಬದಿಗೆ ಸರಿದು ಅನೀತಿ, ಅಧರ್ಮ, ಅನ್ಯಾಯಗಳ ಹಾದಿಯಾದರೂ ಸರಿಯೇ..ಅವರಿವರನ್ನು ತಳ್ಳಿ ತಾನು ಮುಂದೆ ಸಾಗಬೇಕು ಎನ್ನುವ ಅವಿನಯ ವರ್ತನೆಯನ್ನು, ಹುಂಬತನವನ್ನು ಹುಟ್ಟು ಹಾಕುತ್ತಿರುವ ಇಂದಿನ ಶಿಕ್ಷಣ ಪ್ರಕ್ರಿಯೆ ಬದಲಾಗಬೇಕು ಎನ್ನುವ ಕೃತಿಕಾರರ ಆಶಯ ನಮ್ಮೆಲ್ಲರ ಆಶಯವಾಗಬೇಕಿದೆ.
ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಭಕ್ತಿ ಭಂಡಾರಿ ಸಮಾಜ ಸುಧಾರಕ ಬಸವಣ್ಣನವರೇ ಮೊದಲಾದ ಶರಣರ ಕೆಲ ವಚನಗಳೊಂದಿಗೆ ಮೂಡಿಬಂದ ‘ ಕಿಲಾಡಿತನ ಮತ್ತು ಕಿಡಿಗೇಡಿತನ ‘ ಎನ್ನುವ ಲೇಖನ ಜೀವ ವಿರೋಧಿ ತತ್ವಗಳ ಪಾಲನೆಗೆ ಮುನ್ನುಗ್ಗುತ್ತಿರುವ ಮಾನವರಿಗೆ ಸತ್ಪಥವನ್ನು ತೋರುವ ದಿವ್ಯ ಸಂದೇಶವೇ ಆಗಿದೆ. ನಾನು -ನನ್ನದು ಎಂಬ ಸಂಕುಚಿತ ವೃತ್ತದೊಳಗೇ ಜೀವನ ಸಾಗಿಸುತ್ತಿರುವ ನಾವು ನಮ್ಮ ಸಾಮಾಜಿಕ ಜವಾಬ್ದಾರಿಗಳಾದ ಹಸಿದವನಿಗೆ ಅನ್ನ, ಬಾಯಾರಿದವನಿಗೆ ನೀರು, ಆಶ್ರಯ ಬಯಸಿ ಬಂದವನಿಗೆ ನೆಲೆ ಈ ಮಾನವೀಯ ಮೌಲ್ಯಗಳನ್ನೇ ಮರೆತಿದ್ದೇವೆ ಎನ್ನುವ ಲೇಖಕರ ನೋವಿನ ಸಾಲುಗಳು ಓದುಗರ ಒಳಗಣ್ಣು ತೆರೆಸುತ್ತವೆ. ಪ್ರಕೃತಿಯೇ ಪರಮಾತ್ಮ ಎನ್ನುವ ಚಿಂತನೆಯನ್ನು ಎರಡು ಮೂರು ಲೇಖನಗಳು ಉದಾಹರಣೆ ಸಹಿತ ಸ್ಪಷ್ಟಪಡಿಸಿದ್ದು ಈ ಪ್ರಕೃತಿಗೆ ನಮ್ಮ ಕೊಡುಗೆ ಏನು ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ. ಕೃತಜ್ಞತಾ ಮನೋಭಾವ ಮಾನವನಿಗೆ ಇರಬೇಕಾದ ಮೂಲ ಗುಣ. ಈ ಅಲ್ಪಕಾಲದ ಬದುಕಿನಲ್ಲಿ ಇತರರಿಗಾಗಿ ಬದುಕುವವರಷ್ಟೇ ಲೆಕ್ಕದಲ್ಲಿ ಉಳಿಯುವವರು ಎನ್ನುವ ಕೃತಿಕಾರರ ಚಿಂತನೆ ನಾವುಗಳು ಲೆಕ್ಕದಲ್ಲಿ ಉಳಿಯಬೇಕೇ…. ಹೊರಗುಳಿಯಬೇಕೇ… ಎನ್ನುವ ಚಿಂತನೆಯನ್ನು ನಮ್ಮಲ್ಲೇ ಹುಟ್ಟು ಹಾಕುತ್ತದೆ.
‘ ಬೇಕು ಎನ್ನುವವನಿಗೆ ಸ್ವರ್ಗವೂ ನರಕವೇ.. ಸಾಕು ಎನ್ನುವವನಿಗೆ ನಿಂತ ನೆಲವೆಲ್ಲವೂ ಸ್ವರ್ಗವೇ ‘ ಎನ್ನುವ ಮಾತಿನ ಸಂಪೂರ್ಣ ಚಿತ್ರಣ’ ಸಮಾಧಾನ ‘ ದಲ್ಲಿದೆ. ಪ್ರತಿಷ್ಠೆ, ಶ್ರೇಷ್ಠತೆ ಎನ್ನುವ ಏಕಮುಖ ಚಿಂತನೆಯಿಂದ ವಿಶ್ವಮಾನವತೆಯತ್ತ ನಮ್ಮ ದೃಷ್ಟಿ ಹರಿಯಬೇಕಿದೆ. ಈ ನಿಟ್ಟಿನಲ್ಲಿ ದುಡಿದು ಗಳಿಸಿ ಹೊಟ್ಟೆ ಹೊರೆಯುವ, ‘ನಾನು’ ಎಂದು ಮೆರೆಯುವ, ಸಂಕುಚಿತ ಮನೋಭಾವ ದೂರವಾಗಿ ‘ನಾವು ‘ ಎಂಬ ಹೃದಯ ವೈಶಾಲ್ಯತೆ ನಮ್ಮದಾದಾಗ ಮಾನವ ಜನ್ಮ ಸಾರ್ಥಕ ಎನ್ನುವ ಸಂದೇಶವನ್ನು ‘ಸಮಾಧಾನ’ಎನ್ನುವ ಕೃತಿ ನೀಡುತ್ತದೆ. ಇಂತಹ ಅಪೂರ್ವ ಕೃತಿಯನ್ನು ಸಾರಸ್ವತ ಲೋಕಕ್ಕೆ ನೀಡಿದ ಸ. ರಾ. ಸುಳಕೂಡೆಯವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತಾ,ಸಂಗ್ರಹ ಯೋಗ್ಯವಾದ ಈ ಕೃತಿ ಮನೆ ಮನೆಗಳಿಗೆ ತಲುಪಲಿ, ಸಮಾಜಮುಖಿ ಚಿಂತನೆಗಳನ್ನು ಓದುಗರ ಎದೆಯಲ್ಲಿ ಹುಟ್ಟು ಹಾಕುವ ಮತ್ತಷ್ಟು ಕೃತಿಗಳು ಶ್ರೀಯುತರಿಂದ ಹೊರಹೊಮ್ಮಲಿ ಎಂದು ಆಶಿಸುತ್ತಾ, ಈ ನಿಟ್ಟಿನಲ್ಲಿ ಸುಳಕೂಡೆಯವರಿಗೆ ದೇವರ ಆಶೀರ್ವಾದ ಸದಾ ಇರಲಿ ಎಂದು ಭಗವಂತನಲ್ಲಿ ಬೇಡುತ್ತೇನೆ.

ಜಯಲಕ್ಷ್ಮಿ ಕೆ
ಮಡಿಕೇರಿ.
