ಸುದ್ದಿ ಕನ್ನಡ ವಾರ್ತೆ
ಜೋಯಿಡಾ ವಿವಿಧ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ದಿನಾಂಕ 21-09-2026 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಅಸಹಕಾರ ಚಳುವಳಿ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜೋಯಿಡಾ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದೆ.
ಎಲ್ಲಾ ಪಿಡಿಒ ಹುದ್ದೆಗಳನ್ನು ಗ್ರೂಪ್-ಬಿ ಗೆ ಮೇಲ್ದರ್ಜೀಕರಿಸುವುದು, ಜೇಷ್ಠತಾ ಪಟ್ಟಿ ಗೊಂದಲ ನಿವಾರಿಸಿ ಬಡ್ತಿ ನೀಡುವುದು, 15ನೇ ಹಣಕಾಸು ಆಯೋಗದ ಬಾಕಿ ಅನುದಾನ ಬಿಡುಗಡೆ ಮಾಡುವುದು ಮತ್ತು ಇ-ಸ್ವತ್ತು ತಂತ್ರಾಂಶದ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಧಿಕಾರಿಗಳು ಒತ್ತಾಯಿಸಿದ್ದಾರೆ. ಇಲಾಖೆಯ ಹೆಚ್ಚುವರಿ ಕೆಲಸದ ಒತ್ತಡದಿಂದ ತಮಗೆ ಮುಕ್ತಿ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಮುಷ್ಕರದ ಮೊದಲ ಮೂರು ದಿನಗಳ ಕಾಲ ಆಯಾ ಜಿಲ್ಲಾ ಪಂಚಾಯತ್ ಕಚೇರಿಗಳ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದ್ದು, ನಂತರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯಮಟ್ಟದ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಯಲಿದೆ. ಹೋರಾಟದ ಅವಧಿಯಲ್ಲಿ ಕುಡಿಯುವ ನೀರು, ಬೀದಿದೀಪ ಮತ್ತು ನೈರ್ಮಲ್ಯದಂತಹ ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಆಡಳಿತಾತ್ಮಕ ಕಾರ್ಯಗಳು ಮತ್ತು ಸರ್ಕಾರಿ ಯೋಜನೆಗಳ ಅನುಷ್ಠಾನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಅಸಹಕಾರ ವ್ಯಕ್ತಪಡಿಸಲಾಗುವುದು ಎಂದು ಸಂಘವು ತಿಳಿಸಿದೆ.
ಈ ಸಂದರ್ಭದಲ್ಲಿ ಜೋಯಿಡಾ ತಾಲೂಕಿನ ಪಿಡಿಓ ಗಳಾದ ನಜೀರಸಾಬ್ ಅಕ್ಕಿ, ಬಸವರಾಜ್ ಬಿ, ವೆಂಕಟೇಶ ಕುಲಕರ್ಣಿ, ನಬಿಲಾಲ್ ಇನಾಮದಾರ,ಎನ್ಸನ್ ಹಾಗೂ ರೂಪೇಶ ಇತರರು ಇದ್ದರು.
