ಸುದ್ದಿ ಕನ್ನಡ ವಾರ್ತೆ
ಕಸ್ತೂರಿ ರಂಗನ್ ವರದಿ ಜಾರಿಗೆ ೭ ನೆಯ ಕರಡು ಅಧಿಸೂಚನೆ ವಿರೋಧಿಸಿ ನಡೆಸಲಾಗುತ್ತಿರುವ ರಾಜ್ಯವ್ಯಾಪಿ ಸಿಪಿಐಎಂ ಹಾಗೂ ಜನಪರ ಸಂಘಟನೆಗಳ ಹೋರಾಟದ ಭಾಗವಾಗಿ ಸಿಪಿಐ(ಎಂ) ಪಕ್ಷದ ರಾಜ್ಯ ನಿಯೋಗ ರಾಜ್ಯ ಸರ್ಕಾರದ ಅರಣ್ಯ ಮತ್ತು ಪರಿಸರ ಮಂತ್ರಿಗಳಾದ ರಾಮಲಿಂಗಾರೆಡ್ಡಿಯವರನ್ನು ಇಂದು ದಿ. ೧೫-೯-೨೦೨೬ ರಂದು ಭೇಟಿಯಾಗಿ ಚರ್ಚಿಸಿ ಹಕ್ಕೊತ್ತಾಯ ಪತ್ರ ನೀಡಲಾಯಿತು. ರಾಜ್ಯ ವಿಧಾನ ಸಭಾ ವಿಶೇಷ ಅಧಿವೇಶನದಲ್ಲಿ ಸರ್ಕಾರವು ಜನ ಜೀವನ ಮತ್ತು ಪರಿಸರ ಪೂರಕವಾಗಿ ಯಾವೆಲ್ಲ ಅಂಶಗಳನ್ನು ಪರಿಗಣಿಸಬೇಕೆಂದು ಪ್ರಮುಖ ನಾಲ್ಕು ಅಂಶಗಳ ಸಲಹೆಗಳನ್ನು ಸರ್ಕಾರಕ್ಕೆ ನೀಡಿ ಆಗ್ರಹಿಸಲಾಯಿತು. ನಿಯೋಗದಲ್ಲಿ ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ ರಾಜ್ಯದ ಹಿತ ರಕ್ಷಿಸಲು ಒತ್ತಾಯಿಸಿದರು. ಉಕ ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರ್ ಉತ್ತರ ಕನ್ನಡ, ಕೊಡಗು ಜಿಲ್ಲಾ ಮುಖಂಡರಾದ ಡಾ. ದುರ್ಗಾಪ್ರಸಾದ್, ಅದಿವಾಸಿ ಹಕ್ಕುಗಳ ಸಮಿತಿಯ ಡಾ. ಗುರುಶಾಂತ್, ಶ್ರೀಧರ ನಾಡಾ, ಸಿಪಿಐಎಂ ರಾಜ್ಯ ಸಮಿತಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಉಡುಪಿ, ಜೆ.ಜಯರಾಮ ಮೈಸೂರು, ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ಸಾಬು ವಿರಾಜಪೇಟೆ ಭಾಗವಹಿಸಿದ್ದರು. ಮಾನ್ಯ ಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಮಾತಾಡಿದರು.
ಉತ್ತರ ಕನ್ನಡ ಜಿಲ್ಲೆಯ ಸಿಪಿಐಎಂ ಹಾಗೂ ಜನಚಳುವಳಿಗಳ ಪರವಾಗಿ ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರ್ ಮಾತನಾಡಿ,
ಈಗಾಗಲೇ ಅರಣ್ಯ, ಪರಿಸರ, ಜೀವವೈವಿದ್ಯ ಮತ್ತು ವನ್ಯಜೀವಿ ರಕ್ಷಣೆಯ ಕುರಿತು ಮಹತ್ವದ ಕಾಯ್ದೆಗಳಿವೆ. ಆದರೆ ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಕುರಿತು ಡಾ. ಕಸ್ತೂರಿ ರಂಗನ್ ವರದಿ ಅನುಷ್ಠಾನದ ಏಳನೇ ಕರಡು ಅಧಿಸೂಚನೆಯಿಂದ ಹೆಚ್ಚುವರಿ ಷರತ್ತುಗಳಿಗೆ ಜನ ಒಳಗಾಗಲಿದ್ದಾರೆ. ಭಯ ಮತ್ತು ಆತಂಕದಲ್ಲಿ ಅರಣ್ಯವಾಸಿಗಳು ಬದುಕುವಂತಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅರಣ್ಯವಾಸಿಗಳನ್ನು ತೊಂದರೆಗೀಡು ಮಾಡಿದರೆ ಅವರಿಗೆ ಪರ್ಯಾಯ ದಾರಿಗಳಿಲ್ಲ. ವಿಶೇಷವಾಗಿ ಘೋಷಿತವಲ್ಲದ ಬುಡಕಟ್ಟುಗಳು ಹಾಗೂ ಅರಣ್ಯ ಭೂಮಿಯಲ್ಲಿಯೇ ಕೃಷಿ ಚಟುವಟಿಕೆಗಳನ್ನು ಅಥವಾ ಬದುಕಲು ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತ ಕಾರ್ಮಿಕ ಕೂಲಿಕಾರರು ಬೀದಿಪಾಲಾಗುತ್ತಾರೆ. ದೈನಂದಿನ ಓಡಾಟಕ್ಕೂ ನಿರ್ಬಂಧಗಳಾಗಿ ಮನೋವೈಜ್ಞಾನಿಕವಾದ ಸವಾಲುಗಳು ಕೂಡ ಎದುರಾಗುತ್ತವೆ. ಈ ವಿಭಾಗದ ದುಡಿಮೆ ಮತ್ತು ಆದಾಯದ ಮೇಲೆ ಅವಲಂಬಿಸಿದ ಜಿಲ್ಲೆಗಳ ಅಭಿವೃದ್ಧಿ ಪ್ರಕ್ರಿಯೆ ಕುಂಠಿತವಾಗುತ್ತದೆ. ಹಾಗಾಗಿ ಈ ಏಳನೇ ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರ ಒಪ್ಪಬಾರದು. ಕಾಡಿನಲ್ಲಿ ವಾಸಿಸುವವರಿಗೆ ಅರಣ್ಯ ಉತ್ಪನ್ನ ಬಳಸಲು ಅವಕಾಶ, ರಸ್ತೆ, ಸೇತುವೆ, ಶಿಕ್ಷಣ, ಸಾಕುಪ್ರಾಣಿಗಳ ಮೇವು ಹಾಗೂ ಇತರ ಮೂಲ ಸೌಕರ್ಯ ಅಭಿವೃದ್ಧಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಕೇಂದ್ರ ಸರ್ಕಾರದ ಎದುರು ಸಾಂವಿಧಾನಿಕ ಮಾನ್ಯತೆಗೆ ಕಾಯುತ್ತಿರುವ ರಾಜ್ಯದ ಘೋಷಿತವಲ್ಲದ ಬುಡಕಟ್ಟುಗಳ ಹಿತ ಕಾಪಾಡಬೇಕು. ಜೀವನೋಪಾಯಕ್ಕಾಗಿ ಅರಣ್ಯ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ಕೃಷಿಯೋಗ್ಯ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡಿರುವವರನ್ನು, ವಸತಿಗಾಗಿ ಮನೆ ಕಟ್ಟಿಕೊಂಡಿರುವವರನ್ನು ಈ ವರದಿಯ ಕಾರಣಕ್ಕಾಗಿ ಎಬ್ಬಿಸಬಾರದು ಎಂದು ಆಗ್ರಹಿಸಿದರು.
ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಮತ್ತು ಅಲ್ಲಿನ ಲಕ್ಷಾಂತರ ಜನರ ಬದುಕು, ಹಕ್ಕುಗಳು ಹಾಗೂ ಅಭಿವೃದ್ಧಿಯ ಆಕಾಂಕ್ಷೆಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ರಾಜ್ಯ ಸರ್ಕಾರವು ಈ ವಿಷಯದಲ್ಲಿ ಭಾರತ ಸರ್ಕಾರದೊಂದಿಗೆ ದೃಢವಾಗಿ ವ್ಯವಹರಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)ಯ ರಾಜ್ಯ ನಿಯೋಗವು ಬಲವಾಗಿ ಆಗ್ರಹಿಸುತ್ತದೆ.
ಈ ಮುಂಬರುವ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ಫಲಪ್ರದವಾಗುವಂತೆ ಕೂಲಂಕುಶವಾಗಿ ಚರ್ಚಿಸಬೇಕೆಂದು, ರಾಜ್ಯದಲ್ಲಿರುವ ಪರಿಸ್ಥಿತಿ ವಾಸ್ತವ ಅಧ್ಯಯನಕ್ಕೆ ಸಮಿತಿ ರಚಿಸಬೇಕೆಂದು ಹಾಗೂ ರಾಜ್ಯದ ಜನತೆ ಹಾಗೂ ಪರಿಸರ ಹಿತರಕ್ಷಣೆಗೆ ನಾಲ್ಕು ಪ್ರಮುಖ ಸಲಹೆಗಳನ್ನು ಭಾರತ ಕಮ್ಯೂನಿಷ್ಟ್ ಪಕ್ಷ (ಮಾರ್ಕ್ಸ್ವಾದಿ) ರಾಜ್ಯ ಸರ್ಕಾರಕ್ಕೆ ನೀಡಿದೆ.
