ಸುದ್ದಿ ಕನ್ನಡ ವಾರ್ತೆ
ಶಿರಸಿ: ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರುತ್ತಿರುವುದು ಒಂದೊಂದೇ ಪ್ರಕರಣಗಳು ಹೊರಬರುತ್ತಿರುವುದರಿಂದ ಸ್ಪಷ್ಟವಾಗುತ್ತಿದೆ. ಬೇರೆ ಬೇರೆ ಸಚಿವರ ಹಗರಣಗಳೂ ಹೊರಬರಲು ಕ್ಯೂನಲ್ಲಿ ನಿಂತಿವೆ. ಕೆಪಿಎಸ್ಸಿ ಹಗರಣದಲ್ಲಿ ಭಾಗಿಯಾಗಿರುವ ಸಚಿವರೂ ಮುಂದಿನ ದಿನಗಳಲ್ಲಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ ಹಾಗೂ ಎಸ್ಐಆರ್ ಕುರಿತು ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಸರ್ಕಾರದ ಒಂದು ವಿಕೆಟ್ ಈಗಾಗಲೇ ಬಿದ್ದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಕರಣಗಳು ಹೊರಬರುವ ಸಾಧ್ಯತೆ ಇದೆ. ಜನರ ಪರವಾಗಿ ಬಿಜೆಪಿ ಸದಾ ಧ್ವನಿ ಎತ್ತಲಿದೆ. ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ನಡೆಸುತ್ತಿರುವ ಹೋರಾಟ ಮುಂದುವರಿಯಲಿದೆ ಎಂದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದರೂ ರಾಜಕೀಯ ಕಾರಣಕ್ಕಾಗಿ ಕೆಲವು ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಡಲಾಗಿತ್ತು. ಬಿಜೆಪಿ ಈ ಕುರಿತು ಹೋರಾಟ ನಡೆಸಿದ ಬಳಿಕ ಡಿ.ಕೆ. ಶಿವಕುಮಾರ ಅವರು ಹೆಲಿಕಾಪ್ಟರ್ ಮೂಲಕ ಪ್ರವಾಸ ಆರಂಭಿಸಿದ್ದಾರೆ. ಸರ್ಕಾರದ ಗಮನವನ್ನು ಜನರ ಸಮಸ್ಯೆಗಳತ್ತ ಸೆಳೆಯಲು ಬಿಜೆಪಿ ನಿರಂತರವಾಗಿ ಹೋರಾಟ ನಡೆಸುತ್ತಿದೆ ಎಂದು ಹೇಳಿದರು.
ಬಿಜೆಪಿ ಹೋರಾಟಕ್ಕೆ ಸರ್ಕಾರ ಮಣಿಯುತ್ತಿದೆ
ಗುಟ್ಕಾ ನಿಷೇಧದ ವಿಚಾರದಲ್ಲಿಯೂ ಬಿಜೆಪಿ ಹೋರಾಟ ನಡೆಸಿದ ಪರಿಣಾಮ ಸರ್ಕಾರ ತನ್ನ ನಿರ್ಧಾರವನ್ನು ವಾಪಸ್ ಪಡೆಯಬೇಕಾಯಿತು. ಕಸ್ತೂರಿರಂಗನ್ ವರದಿ ವಿಚಾರದಲ್ಲಿಯೂ ಜಿಲ್ಲೆಯ ಜನರ ಆತಂಕವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ಬಿಜೆಪಿ ಆಗ್ರಹಿಸಿದಾಗ, ಒಂದು ದಿನದ ವಿಧಾನಸಭಾ ಅಧಿವೇಶನ ಕರೆಯುವ ಬಗ್ಗೆ ಡಿ.ಕೆ. ಶಿವಕುಮಾರ ಅವರು ಹೇಳಿಕೆ ನೀಡಿದ್ದಾರೆ. ಜಿಲ್ಲೆಯ ಹಿತದೃಷ್ಟಿಯಿಂದ ಕಸ್ತೂರಿರಂಗನ್ ವರದಿ ಕುರಿತು ಸ್ಪಷ್ಟ ನಿಲುವು ಕೈಗೊಳ್ಳಬೇಕು. ಕೇರಳ ಮಾದರಿ ಅನುಸರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಕಾಗೇರಿ ಒತ್ತಾಯಿಸಿದರು.
ರಾಜ್ಯ ಸರಕಾರ ಹೇಗೂ ಹೀಗೂ ಅವಧಿ ಮುಗಿಸಲು ಮುಂದಾಗಿದೆ. ಈಗ ಖಂಡ್ರೆ ಅವರು ಅತಿಕ್ರಮಣದಾರರು ತೆರಿಗೆ ನೀಡದಂತೆ, ಮನೆಯ ನಂಬರ್ ತೆಗೆಯುವಂತೆ ಆದೇಶಿಸಿದೆ ಎಂದು ವಾಗ್ದಾಳಿ ಮಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಗಾಂವಠಾಣಾ, ಅತಿಕ್ರಮಣ ಹಾಗೂ ಸರ್ಕಾರಿ ಜಾಗಗಳಿಗೆ ಸಂಬಂಧಿಸಿದಂತೆ ಗ್ರಾಮೀಣ ಭಾಗದ ಜನರಿಗೆ ತೊಂದರೆ ಉಂಟುಮಾಡುವ ಗ್ರಾಮೀಣಾಭಿವೃದ್ಧಿ ಇಲಾಖೆಯ ಆದೇಶದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ಗ್ರಾಮಠಾಣಾ ವ್ಯಾಪ್ತಿಯ ಜಾಗ, ಅತಿಕ್ರಮಣ ಜಾಗ ಹಾಗೂ ಸರ್ಕಾರಿ ಜಾಗದಲ್ಲಿ ತೆರಿಗೆ ಪಡೆಯಬಾರದು, ಅಂತಹ ಜಾಗಗಳಲ್ಲಿರುವ ಮನೆಗಳಿಗೆ ಮನೆ ಸಂಖ್ಯೆ ನೀಡಬಾರದು ಎಂಬ ರೀತಿಯ ಆದೇಶಗಳಿಂದ ಗ್ರಾಮೀಣ ಜನರು ಸಂಕಷ್ಟಕ್ಕೊಳಗಾಗುವಂತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಮಂಡಲಗಳಲ್ಲಿ ಸಂಸದರ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಶಾಸಕ ಎಸ್.ವಿ. ಸಂಕನೂರು, ರೂಪಾಲಿ ನಾಯ್ಕ, ಸುನೀಲ್ ನಾಯ್ಕ, ಕೆ.ಜಿ. ನಾಯ್ಕ, ಹರಿಪ್ರಕಾಶ ಕೋಣೆಮನೆ, ವೆಂಕಟೇಶ ನಾಯ್ಕ, ಸುನೀಲ ಹೆಗಡೆ, ಶಿವಾನಂದ ನಾಯ್ಕ, ಗೋವಿಂದ ನಾಯ್ಕ, ಆರ್.ಡಿ. ಹೆಗಡೆ, ಗುರುಪ್ರಸಾದ ಹರ್ತೆಬೈಲ್, ಪ್ರಶಾಂತ ನಾಯ್ಕ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
