ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ :ಮದ್ಯವರ್ಜನ ಶಿಬಿರಗಳು ಶಿಬಿರಾರ್ಥಿಗಳಿಗೆ ಪುನರ್ಜನ್ಮ ಇದ್ದಂತೆ. ಕುಡಿತದ ಚಟಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳುಮಾಡಿಕೊಂಡವರು ಹಲವರಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಮದ್ಯ ವರ್ಜನ ಶಿಬಿರಗಳನ್ನು ನಡೆಸುವ ಮೂಲಕ ಹೊಸ ಜೀವನವನ್ನು ನೀಡುವ ಕೆಲಸ ಮಾಡುತ್ತಿದೆ ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು .

ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಯಲ್ಲಾಪುರ, ಮುಂಡಗೋಡ ತಾಲೂಕು ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 2114ನೇ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಾಕಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಪೂಜ್ಯ ವಿರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಮದ್ಯ ವರ್ಜನ ಶಿಬಿರಗಳನ್ನು ನಡೆಸಲಾಗುತ್ತಿದೆ. 2114 ನೇ ಶಿಬಿರ ಯಲ್ಲಾಪುರದಲ್ಲಿ ನಡೆಯುತ್ತಿದೆ. ಶಿಬಿರಾರ್ಥಿಗಳು ಈ ಶಿಬಿರದಿಂದ ಹೊಸ ಜೀವನವನ್ನು ಆರಂಭಿಸಬೇಕು. ದುಶ್ಚಟಗಳಿಂದ ಮುಕ್ತರಾಗಿ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಪಡೆದುಕೊಳ್ಳಬೇಕು. ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳು ಜೀವನದಲ್ಲಿ ಮತ್ತೆ ಮದ್ಯವನ್ನು ಸೇವಿಸುವುದಿಲ್ಲ ಎಂಬ ದೃಢ ಸಂಕಲ್ಪವನ್ನು ಮಾಡಬೇಕು. ಶಿಬಿರಾರ್ಥಿಗಳ ಮುಂದಿನ ಜೀವನ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ,ಗಣೇಶ ಹೆಗಡೆ, ಪ್ರಸಾದ ಹೆಗಡೆ ಲೋಕೇಶ, ವೀಣಾ ಯಲ್ಲಾಪುರ ಕರ್ , ಸುನಂದ ದಾಸ್ ,ಗ.ರಾ ಭಟ್ ಸೇರಿದಂತೆ ಹಲವರು ಇದ್ದರು.