ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕುಂಬಾರವಾಡ (ಕಾತೇಲಿ) ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಕೊಂದರ ಶಾಲೆಯ ಮುಖ್ಯ ಶಿಕ್ಷಕರಾದ ಈರಣ್ಣ ಪಗಡಿಯವರು ಶಿರಸಿ ಶೈಕ್ಷಣಿಕ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ​ಶ್ರೀ ಈರಣ್ಣ ಶಿವಪುತ್ರಪ್ಪ ಪಗಡಿ ಮದನಳ್ಳಿ( ಹಳಿಯಾಳ ತಾಲೂಕು) ಇವರು ಪ್ರಾಥಮಿಕ ಶಿಕ್ಷಕರ ತರಬೇತಿ ಪಡೆದು ದಿನಾಂಕ 23.02.1999 ರಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊದಲಗೇರಾ ಹಳಿಯಾಳ ತಾಲೂಕಿನಲ್ಲಿ ಸಹ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿ ನಂತರ ದಿನಾಂಕ 28-11-2003 ರಂದು ಜೋಯಿಡಾ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಂದಕ್ಕೆ ವರ್ಗಾವಣೆಯಾಗಿ ಬಂದು13 ವರ್ಷಗಳ ಕಾಲ ಜನಮೆಚ್ಚಿದ ಶಿಕ್ಷಕರಾಗಿ ಸೇವೆ ಸಲ್ಲಿಸಿರುತ್ತಾರೆ. ನಂತರ ಹೆಚ್ಚುವರಿ ಪ್ರಕ್ರಿಯೆಯಲ್ಲಿ ವರ್ಗಾವಣೆಯಾಗಿ ದಿನಾಂಕ 02-08-2016 ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಕೊಂದರದಲ್ಲಿ ಸೇವೆ ಸಲ್ಲಿಸುತ್ತಿದ್ದು ಒಟ್ಟು 27 ವರ್ಷಗಳ ಕಾಲದ ಸುದೀರ್ಘ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
​ಕೊಂದರ ಶಾಲೆ ತಾಲೂಕು ಕೇಂದ್ರದಿಂದ ಸುಮಾರು 15 ಕಿ.ಮೀ. ದೂರವಿರುವುದು. ಸುಂದರವಾದ ದಟ್ಟ ಅರಣ್ಯದಲ್ಲಿ, ಪ್ರಕೃತಿಯ ಮಡಿಲಲ್ಲಿ ಇರುವಂತಹ ಶಾಲೆಯಲ್ಲಿ, ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಭಾಗ್ಯ ಇವರದ್ದು, ಮುಗ್ಧ ಜನತೆಯ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಸ್ ಡಿ ಎಮ್ ಸಿ, ಊರ ನಾಗರಿಕರು, ದಾನಿಗಳು, ಗಣ್ಯರು, ಜನ ಪ್ರತಿನಿಧಿಗಳು ಸಹಕಾರ ಪಡೆದು ಅಧಿಕಾರಿಗಳ, ಮಾರ್ಗದರ್ಶಕರ ಸಹಕಾರ,ಪ್ರೋತ್ಸಾಹ ಮಾರ್ಗದರ್ಶನದಂತೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ.
​ಇವರು ಸೇವೆಗೆ ಸೇರಿದ ನಂತರ ಮಕ್ಕಳಿಗೆ ಪ್ರತಿಭಾ ಕಾರಂಜಿ, ಇಕೋ ಕ್ಲಬ್, ಪ್ರೇರಣಾ ಕ್ಲಬ್ ಮುಂತಾದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ನಮ್ಮ ಶಾಲೆಯ ಕೀರ್ತಿಯನ್ನು ಬೆಳಗುವಂತೆ ಮಾಡಿದ್ದಾರೆ. ಈಗಲೂ ಸತತ ಪ್ರಯತ್ನದಿಂದ ನಿರಂತರವಾಗಿ ಮಕ್ಕಳ ಕಲಿಕೆಗೆ ಹಾಗೂ ಶಾಲೆಯ ಅಭಿವೃದ್ಧಿಗಾಗಿ ಎಲ್ಲರ ಸಹಕಾರದೊದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
​ಅದರಂತೆ ಕೊಂದರ ಶಾಲೆಯಲ್ಲಿ ಮಕ್ಕಳಿಂದ ಕೈತೋಟ ಮಾಡಿ ತರಕಾರಿಗಳನ್ನು ಮಕ್ಕಳಿಂದ ಸ್ವತಃ ಬೆಳೆಸಿ ಅದನ್ನು ಮಧ್ಯಾಹ್ನದ ಬಿಸಿ ಊಟದಲ್ಲಿ ತಾಜಾ ತರಕಾರಿ ಬಳಸುವಂತೆ ಮಾಡಿದ್ದಾರೆ.ಎಲ್ಲಾ ಕಾರ್ಯಕ್ರಮಗಳಿಗೆ ಊರಿನವರ ಬೆಂಬಲ ದೊರೆಯುತ್ತಿರುವುದು ಸಂತಸದಾಯಕ ವಿಷಯವಾಗಿದೆ. ಮುಂದೆ ಇದೇ ರೀತಿಯಲ್ಲಿ ಸಹಕಾರ ಪಡೆಯುತ್ತಾ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪ್ರಯತ್ನ ಮುಂದುವರೆಯುವುದು ಇವರ ಅಭಿಲಾಷೆಯಾಗಿದೆ.ಕೊಂದರ ಶಾಲೆಗೆ ಬಂದ ನಂತರ ನಲಿ-ಕಲಿ ತರಗತಿಯ ಬೋಧನೆಗೆ 2019-20 ರಲ್ಲಿ ಉತ್ತಮ ನಲಿ-ಕಲಿ ಶಾಲೆ ಪ್ರಶಸ್ತಿ.2024-25 ರಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು,ಜಿಲ್ಲಾಘಟಕ: ಶಿರಸಿ ಶೈಕ್ಷಣಿಕ ಜಿಲ್ಲೆ ಡಾ॥ಎಸ್ ರಾಧಾಕೃಷ್ಣನ್ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಕೊಂದರ ಗ್ರಾಮದ ಕುಮಾರ ಪ್ರದೀಪ ಶಂಕರ ಖೋಲಕರ ಬಡ ಕುಟುಂಬದ ವಿದ್ಯಾರ್ಥಿಯನ್ನು ಶಿಕ್ಷಣಕ್ಕಾಗಿ ದತ್ತು ಪಡೆದಿದ್ದು,ಈಗ ಆತನು 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.ಅದಲ್ಲದೇ ಪ್ರತಿ ವರ್ಷ 5 ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಾ,ಶಾಲೆಯಲ್ಲಿ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳ ನೋಟಬುಕ್, ಲೇಖನಿ ಸಾಮಗ್ರಿಗಳ ಖರ್ಚನ್ನು ನೋಡಿಕೊಳ್ಳುತ್ತಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲೆಯ ಅತ್ಯುತ್ತಮ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಈರಣ್ಣ ಪಗಡಿ ಗುರುಗಳಿಗೆ ತಾಲೂಕಿನ ಅಧಿಕಾರಿ ವರ್ಗದವರು,ಶಿಕ್ಷಕ ವೃಂದದವರು,ಗಣ್ಯರು,ಹಳೆಯ ವಿದ್ಯಾರ್ಥಿಗಳು,ಶಾಲೆಯ ಎಸ್ ಡಿ ಎಂ ಸಿ ಪದಾಧಿಕಾರಿಗಳು, ಊರ ನಾಗರೀಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.