ಸುದ್ದಿ ಕನ್ನಡ ವಾರ್ತೆ
ಸಂವಿಧಾನಬದ್ಧ ಹುದ್ದೆಯಲ್ಲಿದ್ದುಕೊಂಡು ನಾಡಿನ ಜನತೆಗೆ ಮಾದರಿಯಾಗಬೇಕಾದ ಉನ್ನತ ಶಿಕ್ಷಣ ಸಚಿವರಾದ ಬಸವರಾಜ್ ರಾಯರೆಡ್ಡಿಯವರು, ಮತೀಯ ಓಲೈಕೆಗಾಗಿ ಸನಾತನ ಧರ್ಮ ಹಾಗೂ ನಮ್ಮ ಮಠ-ಮಾನ್ಯಗಳನ್ನು ತುಚ್ಛವಾಗಿ ಮಾತನಾಡಿರುವುದು ಖಂಡನೀಯ ಎಂದು ಉತ್ತರ ಕನ್ನಡ ಜಿಲ್ಲಾ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಇದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಾನಸಿಕ ದಿವಾಳಿತನ ಮತ್ತು ಹಿಂದೂ ವಿರೋಧಿ ಮನಸ್ಥಿತಿಯನ್ನು ಎತ್ತಿಹಿಡಿದಿದೆ.
ಧರ್ಮ-ಧರ್ಮಗಳ ನಡುವೆ ದ್ವೇಷದ ವಿಷಬೀಜ ಬಿತ್ತುವ ಮೂಲಕ ರಾಜ್ಯದ ಶಾಂತಿ-ಸೌಹಾರ್ದತೆಯನ್ನು ಕದಡಲು ಯತ್ನಿಸುತ್ತಿರುವ ಸರ್ಕಾರದ ಈ ನಡೆ ಅತ್ಯಂತ ಖಂಡನೀಯ.
ಒಂದು ಕಡೆ ಶೈಕ್ಷಣಿಕ ಕ್ಷೇತ್ರವನ್ನು ತಿದ್ದಿ, ಪ್ರಗತಿಯತ್ತ ಕೊಂಡೊಯ್ಯಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು, ಇನ್ನೊಂದೆಡೆ ಮತಬ್ಯಾಂಕ್ ರಾಜಕಾರಣಕ್ಕಾಗಿ ಸ್ವಧರ್ಮವನ್ನೇ ಕೀಳಾಗಿ ಕಾಣುವ ಇಂತಹ ಮಾತುಗಳನ್ನಾಡುವುದು ಶೋಚನೀಯ. ಉನ್ನತ ಮಟ್ಟದ ಜವಾಬ್ದಾರಿಯಲ್ಲಿರುವ ನಾಯಕರೇ ಮತಾಂಧ ಸಿದ್ಧಾಂತಕ್ಕೆ ಮಣೆ ಹಾಕುತ್ತಿದ್ದರೆ, ಈ ನಾಡಿನ ಯುವಜನತೆಗೆ ನೀಡುವ ಸಂದೇಶವಾದರೂ ಏನು?
ಸರ್ಕಾರದ ಇಂತಹ ತುಷ್ಟೀಕರಣದ ನೀತಿಯಿಂದಾಗಿ ಇಂದು ರಾಜ್ಯದ ಪರಿಸ್ಥಿತಿ ತೀರಾ ಕೆಳಮಟ್ಟಕ್ಕೆ ಜಾರುತ್ತಿದೆ. ಕೋಟ್ಯಂತರ ಜನರ ಶ್ರದ್ಧಾಕೇಂದ್ರಗಳಾದ ದೇವಾಲಯಗಳನ್ನು ಮತ್ತು ಸಮಾಜಮುಖಿ ಕಾರ್ಯ ನೀಡುವ ಮಠಗಳನ್ನು ಹಗುರವಾಗಿ ಕಾಣುವ ಮನಸ್ಥಿತಿ ಯಾವುದೇ ಕಾರಣಕ್ಕೂ ಕ್ಷಮಾರ್ಹವಲ್ಲ. ಅಧಿಕಾರದ ಮದದಲ್ಲಿ ಸನಾತನ ಸಂಸ್ಕೃತಿ ಮತ್ತು ನಮ್ಮ ಪರಂಪರೆಯನ್ನು ಕಡೆಗಣಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈ ನಾಡಿನ ಜನತೆ ಸೂಕ್ತ ಪಾಠ ಕಲಿಸಲಿದ್ದಾರೆ.
ತಕ್ಷಣವೇ ಉನ್ನತ ಶಿಕ್ಷಣ ಸಚಿವರಾದ ಬಸವರಾಜ್ ರಾಯರೆಡ್ಡಿಯವರು ದೇಶದ ಕೋಟ್ಯಂತರ ಸನಾತನ ಧರ್ಮೀಯರ ಕ್ಷಮೆಯಾಚಿಸಬೇಕು ಹಾಗೂ ಈ ಬೇಜವಾಬ್ದಾರಿ ನಡವಳಿಕೆಗೆ ಹೊಣೆ ಹೊತ್ತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ಎದುರಿಸಬೇಕಾಗುತ್ತದೆ.ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರ ಕನ್ನಡ ಜಿಲ್ಲಾ ಸಂಸದರು,ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
