ಸುದ್ದಿ ಕನ್ನಡ ವಾರ್ತೆ
​ಶಿರಸಿ: ನಗರದ ನಿಲಕಣೆಯ ಭೀಮನ ಗುಡ್ಡದ ಹತ್ತಿರ ಶನಿವಾರ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯ ಮೇಲೆ ಆಹಾರ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಸುಮಾರು 8 ಲಕ್ಷ ರೂ. ಮೌಲ್ಯದ 473 ಚೀಲಗಳ ಅಕ್ಕಿಯನ್ನು ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ.

​ಖಚಿತ ಮಾಹಿತಿ ಆಧರಿಸಿ ಶಿರಸಿ ತಹಶೀಲ್ದಾರ್‌ ಪಟ್ಟರಾಜು ಗೌಡ ಅವರ ನೇತೃತ್ವದಲ್ಲಿ ಫುಡ್‌ ಇನ್ಸ್‌ಪೆಕ್ಟರ್‌, ರೆವಿನ್ಯೂ ಇನ್ಸ್‌ಪೆಕ್ಟರ್‌ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳ ತಂಡ ಈ ಜಂಟಿ ದಾಳಿ ನಡೆಸಿದೆ.

​ಲಾರಿಯನ್ನು ವಶಕ್ಕೆ ಪಡೆದು ತೂಕ ಮಾಡಿಸಿದಾಗ ಅದರಲ್ಲಿ ಸುಮಾರು 251.90 ಕ್ವಿಂಟಾಲ್‌ ಅಕ್ರಮ ಪಡಿತರ ಅಕ್ಕಿ ಪತ್ತೆಯಾಗಿದೆ. ಜಪ್ತಿ ಮಾಡಲಾದ ಅಕ್ಕಿ ಹಾಗೂ ಲಾರಿಯನ್ನು ಆಹಾರ ಇಲಾಖೆಯ ಗೋದಾಮಿನಲ್ಲಿ ಕಾಯ್ದಿರಿಸಲಾಗಿದೆ ಎಂದು ತಹಶೀಲ್ದಾರ್‌ ಮಾಹಿತಿ ನೀಡಿದ್ದಾರೆ.

​ಈ ಅಕ್ರಮ ಪಡಿತರ ಅಕ್ಕಿಯನ್ನು ಸಿದ್ದಾಪುರ ತಾಲೂಕಿನ ಹಾಳದಕಟ್ಟದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.