ಸುದ್ದಿ ಕನ್ನಡ ವಾರ್ತೆ
​ಹೊನ್ನಾವರ:ತಾಲೂಕಿನ ಆರೋಳ್ಳಿ ಸೇತುವೆಯ ಬಳಿ ಹಾಲು ಸಾಗಿಸುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.

​ಹಿರೇಕೆರೂರು ಸಮೀಪ ಟ್ಯಾಂಕರ್ ಗೆ ಹಾಲು ತುಂಬಿಸಿಕೊಂಡು ಕೇರಳದತ್ತ ತೆರಳುತ್ತಿದ್ದ ವೇಳೆ ಆರೋಳ್ಳಿ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿದೆ. ಬಳಿಕ ಟ್ಯಾಂಕರ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಕಂಬ ಸಮೇತ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ.

​ಟ್ಯಾಂಕರ್ ಪಲ್ಟಿಯಾದ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ವಾಹನದೊಳಗೆ ಸಿಲುಕಿದ್ದ ಚಾಲಕ ರಾಕೇಶ್ ಅವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

​ಅಪಘಾತದ ಪರಿಣಾಮ ಟ್ಯಾಂಕರ್ ನಲ್ಲಿದ್ದ ಅಪಾರ ಪ್ರಮಾಣದ ಹಾಲು ರಸ್ತೆಗೆ ಹರಿದು ಚರಂಡಿ ಸೇರಿದೆ.
​ಘಟನೆ ತಿಳಿದು ಪೊಲೀಸ್ ವೃತ್ತ ನಿರೀಕ್ಷಕ ಸಿದ್ದರಾಮೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಂಡಿದ್ದಾರೆ.