ಸುದ್ಧಿಕನ್ನಡ ವಾರ್ತೆ
ಪಣಜಿ: ಜಗತ್ಪ್ರಸಿದ್ಧ ಮಾನ್ಸೂನ್ ಪ್ರವಾಸಿ ತಾಣ ಎಂದೇ ಪ್ರಸಿದ್ಧಿ ಪಡೆದಿರುವ ಅಂಬೋಲಿ ಜಲಪಾತವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಕಳೆದ ಕೆಲ ದಿನಗಳಿಂದ ಸೈಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅರಣ್ಯ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ. (Amboli Falls has been temporarily closed)

ಕಳೆದ ಕೆಲ ದಿನಗಳಿಂದ ಸೈಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿರುವುದರಿಂದ ಜಗತ್ಪ್ರಸಿದ್ಧ ಅಂಬೋಲಿ ಜಲಪಾತದ ನೀರಿನ ಹರಿವು ಅಪಾಯಮಟ್ಟದಲ್ಲಿದೆ. (The water flow of Amboli falls is under threat) ಜಲಪಾತದಲ್ಲಿ ಭಾರಿ ನೀರಿನ ರಭಸಕ್ಕೆ ಸಣ್ಣಪುಟ್ಟ ಕಲ್ಲುಗಳು ನೀರಿನೊಂದಿಗೆ ಬರುವ ಸಾಧ್ಯತೆಯಿದ್ದು ಜಲಪಾತದ ಕೆಳಗೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಅಪಾಯವಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕವಾಗಿ ಅಂಬೋಲಿ ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ.

ಈ ಭಾಗದಲ್ಲಿ ಮಳೆ ಕಡಿಮೆಯಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ. ಅಪಾಯಕಾರಿ ಸ್ಥಳಗಳಿಗೆ ತೆರಳದಂತೆ ಆಡಳಿತವು ಎಚ್ಚರಿಕೆ ನೀಡಿದೆ. ಅಂಬೋಲಿ ಜಲಪಾತ ವೀಕ್ಷಣೆಗೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಲಪಾತದ ಬಳಿ ಸೂಚನಾ ಫಲಕಹಾಕಿ ಬೇಲಿ ಕಟ್ಟಿ ಬಂದ್ ಮಾಡಲಾಗಿದೆ. ಆದರೂ ಕೂಡ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಆಗಮಿಸಿ ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡುಬರುತ್ತಿದೆ.
ಕರ್ನಾಟಕದ ಪ್ರವಾಸಿಗ ಸಾವು….!
ಅಂಬೋಲಿ ಜಲಪಾತದ ಆನಂದ ಸವಿಯಲು ಬಂದಿದ್ದ ಕರ್ನಾಟಕದ ನಿಪ್ಪಾಣಿಯ ಪ್ರವಾಸಿಗ ಡಾ.ಅಯೂಬ್ ಸಯ್ಯದ್ (45) ಸಾವನ್ನಪ್ಪಿದ್ದಾರೆ. ಇವರು ಮಂಗಳವಾರ ಅಂಬೋಲಿಗೆ ಬಂದಿದ್ದ ಸಂದರ್ಭದಲ್ಲಿ ಮಹಾದೇವ ಗಢದಲ್ಲಿ 400 ಅಡಿ ಆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. (Died after falling 400 feet deep at Mahadev Gad) ಮಂಗಳವಾರ ಸಂಜೆ 5 ಗಂಟೆಯ ಸುಮಾರು ಈ ಭೀಕರ ಘಟನೆ ನಡೆದಿದೆ. ಮಹಾದೇವಗಢ ಪಾಯಿಂಟ್ ನಲ್ಲಿ ಸುರಕ್ಷತಾ ಬೇಲಿಯನ್ನು ದಾಟಿ ಮುಂದೆ ಹೋಗಿದ್ದ ಸಂದರ್ಭದಲ್ಲಿ ಅವರು ಆಳವಾದ ಪ್ರಪಾತಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೋಲಿಸರು ಮತ್ತು ಸ್ಥಳೀಯ ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
