ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಜಗಲಭೇಟ್ ಕ್ಯಾಸಲ್‌ರಾಕ್ ರಸ್ತೆಯ ಅಸು ಗ್ರಾಮದ ಸಮೀಪ ರಸ್ತೆ ಬದಿಯ ಮಣ್ಣು ಕುಸಿದ ಪರಿಣಾಮ ರಸ್ತೆಯ ಒಂದು ಭಾಗ ಅಪಾಯದ ಸ್ಥಿತಿಗೆ ತಲುಪಿದೆ. ರಸ್ತೆ ಬದಿಯಲ್ಲಿ ಅಳವಡಿಸಲಾಗಿದ್ದ ನೀರಿನ ಪೈಪ್ ಮೇಲಿನ ಮಣ್ಣು ಸಂಪೂರ್ಣವಾಗಿ ಕೊಚ್ಚಿಹೋಗಿರುವುದರಿಂದ ಇನ್ನಷ್ಟು ರಸ್ತೆ ಕುಸಿಯುವ ಆತಂಕ ಎದುರಾಗಿದೆ.

ಈ ರಸ್ತೆಯಲ್ಲಿ ಪ್ರತಿದಿನ ಸಾರ್ವಜನಿಕ ಬಸ್ ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿದ್ದು ಜಗಲ್ಬೇಟ್ ಜೋಯಿಡಾ ದಿಂದ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿರುವುದರಿಂದ ವಾಹನಗಳ ಓಡಾಟವೂ ಹೆಚ್ಚಾಗಿದೆ. ಹೀಗಾಗಿ ರಸ್ತೆ ಕುಸಿತದಿಂದ ವಾಹನ ಸವಾರರು ಆತಂಕಗೊಂಡಿದ್ದಾರೆ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ದುರಸ್ತಿ ಹಾಗೂ ಭದ್ರತಾ ಕಾಮಗಾರಿ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಆಗಾಗ ಮಳೆ ಬರುತ್ತಿದ್ದು, ಮಳೆ ಜೋರಾಗಿ ಮುಂದುವರಿದರೆ ರಸ್ತೆ ಇನ್ನಷ್ಟು ಕುಸಿಯುವ ಸಾಧ್ಯತೆ ಇರುವುದರಿಂದ, ಅವಘಡ ಸಂಭವಿಸುವ ಮುನ್ನವೇ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.