ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಮಾಜಿ ಕಂದಾಯ ಸಚಿವೆ ಮತ್ತು ತಾಲಿಗಾಂವ್ ಕ್ಷೇತ್ರದ ಹಾಲಿ ಬಿಜೆಪಿ ಶಾಸಕಿ ಜೆನ್ನಿಫರ್ ಮೊನ್ಸೆರಾತ್ ದೀರ್ಘಕಾಲದ ಅನಾರೋಗ್ಯದ ನಂತರ ಭಾನುವಾರ ನಿಧನರಾದರು. ಶಾಸಕಿ ಜೆನ್ನಿಫರ್ ರವರ ಕ್ಯಾನ್ಸರ್ ವಿರುದ್ಧದ ಅವರ ಹೋರಾಟ ವಿಫಲವಾಗಿದೆ. ಅವರ ನಿಧನದ ಬಗ್ಗೆ ಗೋವಾದ ರಾಜಕೀಯ ವಲಯಗಳಲ್ಲಿ ತೀವ್ರ ದುಃಖ ವ್ಯಕ್ತವಾಗುತ್ತಿದೆ. ಅವರಿಗೆ 51 ವರ್ಷ ವಯಸ್ಸಾಗಿತ್ತು. ಅವರಿಗೆ ಇಬ್ಬರು ಗಂಡು ಮಕ್ಕಳು ರೋಹಿತ್ ಮತ್ತು ಅಮಿತ್, ಒಬ್ಬ ಮಗಳು ಮತ್ತು ಮೊಮ್ಮಕ್ಕಳನ್ನು ಅವರು ಅಗಲಿದ್ದಾರೆ.
ಜೆನ್ನಿಫರ್ ಮೊನ್ಸೆರಾತ್ 2007 ರಲ್ಲಿ ಯುನೈಟೆಡ್ ಗೋವಾಸ್ ಡೆಮಾಕ್ರಟಿಕ್ ಪಾರ್ಟಿ (ಯುಜಿಡಿಪಿ) ಯಿಂದ ಸಾಂತ ಕ್ರೂಜ್ ಕ್ಷೇತ್ರದಿಂದ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ನಂತರ 2012 ರ ವಿಧಾನಸಭಾ ಚುನಾವಣೆಯಲ್ಲಿ, ಅವರು ಉತ್ತರ ಗೋವಾದ ತಾಲಿಗಾಂವ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‍ನಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾದರು. 2017 ರ ಚುನಾವಣೆಯಲ್ಲೂ ತಾಲಿಗಾಂವ್ ಕ್ಷೇತ್ರದಿಂದ ಜಯಗಳಿಸಿದ್ದರು. ಸತತ ಎರಡು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಗೋವಾದ ಮೊದಲ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.
ಜುಲೈ 2019 ರಲ್ಲಿ ಗೋವಾ ರಾಜಕೀಯದಲ್ಲಿ ಪ್ರಮುಖ ಬೆಳವಣಿಗೆಗಳು ಕಂಡುಬಂದವು. ಜೆನ್ನಿಫರ್ ಮೊನ್ಸೆರಾತ್ ತಮ್ಮ ಪತಿ ಬಾಬುಶ್ ಮಾನ್ಸೆರಾತ್ ಮತ್ತು ಇತರ ಕಾಂಗ್ರೆಸ್ ಶಾಸಕರೊಂದಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದರು. ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರ ಸಂಪುಟದಲ್ಲಿ ಅವರು ಕ್ಯಾಬಿನೆಟ್ ಸಚಿವೆಯಾಗಿ ನೇಮಕಗೊಂಡರು. ಗೋವಾ ವಿಧಾನಸಭೆಯ ಇತಿಹಾಸದಲ್ಲಿ ಕ್ಯಾಬಿನೆಟ್ ಸಚಿವೆಯಾದ ಮೊದಲ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಅವಧಿಯಲ್ಲಿ, ಅವರು ಕಂದಾಯ, ಮಾಹಿತಿ ತಂತ್ರಜ್ಞಾನ (ಐಟಿ), ಕಾರ್ಮಿಕ ಮತ್ತು ಉದ್ಯೋಗದಂತಹ ಪ್ರಮುಖ ಇಲಾಖೆಗಳನ್ನು ನಿರ್ವಹಿಸಿದರು.
ರಾಜಕೀಯ ಹುದ್ದೆಗಳ ಹೊರತಾಗಿ, ಜೆನ್ನಿಫರ್ ಮೊನ್ಸೆರಾತ್ ಮಾರ್ಚ್ 2013 ರಿಂದ ಸತತ ಮೂರು ವರ್ಷಗಳ ಕಾಲ ‘ಗೋವಾ ರಾಜ್ಯ ಮಹಿಳಾ ಆಯೋಗ’ದ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದರು. ತಾಲಿಗಾಂವ್ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಅವರು ವಿಶೇಷ ಒತ್ತು ನೀಡಿದ್ದರು. ಸತತ ಮೂರು ಅವಧಿಗೆ ಶಾಸಕಿಯಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಜೆನ್ನಿಫರ್ ಅವರ ನಿಧನದೊಂದಿಗೆ ಗೋವಾ ಜನತೆ ಮಹಿಳಾ ನಾಯಕಿಯನ್ನು ಕಳೆದುಕೊಂಡಿದೆ.
