ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಡಿಜಿಟಲ್ ಯುಗದಲ್ಲಿಯೂ ತಾಲೂಕಿನ ಕರಂಜೋಯಿಡಾ ಗ್ರಾಮದ ಖಾನಗಾಂವ ಭಾಗದ ಜನರು ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿ ಯಾವುದೇ ಮೊಬೈಲ್ ನೆಟ್‌ವರ್ಕ್ ಸಿಗದ ಕಾರಣ, ಕರೆ ಮಾಡಲು ಅಥವಾ ಇಂಟರ್ನೆಟ್ ಬಳಸಲು ಗ್ರಾಮಸ್ಥರು ಗುಡ್ಡಗಳನ್ನು ಏರಿ ನೆಟ್‌ವರ್ಕ್ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಿಂದ ಸುಮಾರು 20 ನಿಮಿಷ ಕಾಲ್ನಡಿಗೆಯಲ್ಲಿ ತಲುಪಬಹುದಾದ ಒಂದು ಗುಡ್ಡ ಇದ್ದರೂ, ಅಲ್ಲಿ ಕೂಡ ಕೆಲವೊಮ್ಮೆ ಮಾತ್ರ ನೆಟ್‌ವರ್ಕ್ ಲಭ್ಯವಾಗುತ್ತದೆ. ಹೆಚ್ಚಿನ ಸಮಯದಲ್ಲಿ ಸಿಗ್ನಲ್ ಇಲ್ಲದ ಕಾರಣ ಗ್ರಾಮಸ್ಥರು ಮತ್ತಷ್ಟು ದೂರದಲ್ಲಿರುವ ದೊಡ್ಡ ಗುಡ್ಡಕ್ಕೆ ತೆರಳಬೇಕಾಗುತ್ತದೆ.
ಗ್ರಾಮಸ್ಥರು ತಮ್ಮ ಕೊಂಕಣಿ ಭಾಷೆಯಲ್ಲಿ “ಮಡ್ಡಿ” ಎಂದು ಕರೆಯುವ ಈ ದೊಡ್ಡ ಗುಡ್ಡಕ್ಕೆ ಸುಮಾರು ಒಂದೂವರೆ ಗಂಟೆ ಕಾಲ್ನಡಿಗೆಯಲ್ಲಿ ತಲುಪಬೇಕು. ಅಲ್ಲಿಗೆ ಹೋದ ನಂತರವೇ ಮೊಬೈಲ್ ಕರೆ ಮಾಡುವುದು, ಇಂಟರ್ನೆಟ್ ಬಳಸುವುದು, ಸಂದೇಶ ಕಳುಹಿಸುವುದು ಹಾಗೂ ಸರ್ಕಾರಿ ಮತ್ತು ಬ್ಯಾಂಕಿಂಗ್ ಸೇರಿದಂತೆ ವಿವಿಧ ಆನ್‌ಲೈನ್ ಸೇವೆಗಳನ್ನು ಪಡೆಯುವುದು ಸಾಧ್ಯವಾಗುತ್ತದೆ.
ತುರ್ತು ಸಂದರ್ಭಗಳಲ್ಲಿ ಅಂಬ್ಯುಲೆನ್ಸ್, ಪೊಲೀಸ್ ಹಾಗೂ ಅಗ್ನಿಶಾಮಕ ಸೇವೆಗಳಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣ, ರೈತರ ಕೃಷಿ ಮಾಹಿತಿ, ಉದ್ಯೋಗ ಹಾಗೂ ಸರ್ಕಾರಿ ಸೇವೆಗಳಿಗೂ ಈ ನೆಟ್‌ವರ್ಕ್ ಸಮಸ್ಯೆ ದೊಡ್ಡ ಅಡ್ಡಿಯಾಗುತ್ತಿದೆ.
ಕರಂಜೋಯಿಡಾ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣವಾಗದಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ದೂರಸಂಪರ್ಕ ಸಂಸ್ಥೆಗಳು ಶೀಘ್ರವಾಗಿ ಈ ಭಾಗದಲ್ಲಿ ಮೊಬೈಲ್ ಟವರ್ ಸ್ಥಾಪಿಸಿ, ಖಾನಗಾಂವ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರ ಹಲವು ವರ್ಷಗಳ ನೆಟ್‌ವರ್ಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
