ಸುದ್ದಿ ಕನ್ನಡ ವಾರ್ತೆ
ಮುಂಡಗೋಡ: ಪಟ್ಟಣದಲ್ಲಿ ಮಂಗಳವಾರ ನಡೆದ ಲೋಕಾಯುಕ್ತ ದಾಳಿಯಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳು ಪ್ರತ್ಯೇಕ ಲಂಚ ಪ್ರಕರಣಗಳಲ್ಲಿ ಬಂಧಿತರಾಗಿದ್ದಾರೆ.
ಮೊದಲ ಘಟನೆಯಲ್ಲಿ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಎಇಇ) ಧರ್ಮರಾಜ್ ಬೆಡಸಗಾಂವ್ ಅವರು ರೂ. 65 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ವಿದ್ಯುತ್ ಗುತ್ತಿಗೆದಾರ ಶಿವಯೋಗಿ ಕೂಡಲಮಠ ನೀಡಿದ ದೂರಿನ ಆಧಾರದ ಮೇಲೆ ದಾಳಿ ನಡೆಸಲಾಗಿತ್ತು. ಅಧಿಕಾರಿ ಲಂಚದ ಹಣ ಸ್ವೀಕರಿಸುವಾಗಲೇ ಅವರನ್ನು ಬಂಧಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ, ಕಂದಾಯ ನಿರೀಕ್ಷಕ ಬಸವರಾಜ್ ಬಿಸನಾಳ ಅವರು ರೂ. 15 ಸಾವಿರ ಲಂಚ ಪಡೆಯುತ್ತಿದ್ದಾಗ ಬಂಧಿತರಾಗಿದ್ದಾರೆ. ಜಮೀನು ಸಂಬಂಧಿತ ಕಾರ್ಯಕ್ಕೆ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿದ್ದ ನಾರಾಯಣ ಅರೆ ಜೋಗಿ ಅವರಿಗೆ ಅನುಮತಿ ನೀಡಲು ಲಂಚ ಕೇಳಲಾಗಿದೆ ಎಂದು ಆರೋಪಿಸಲಾಗಿದೆ. ಹಣ ನೀಡಲು ಸಾಧ್ಯವಾಗದೆ ನಾರಾಯಣ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ದಾಳಿ ನಡೆಸಲಾಗಿದೆ. ಲಂಚದ ಹಣ ಸ್ವೀಕರಿಸುವಾಗಲೇ ಬಸವರಾಜ್ ಅವರನ್ನು ವಶಕ್ಕೆ ಪಡೆಯಲಾಗಿದೆ.
ಈ ಕಾರ್ಯಾಚರಣೆಯನ್ನು ಡಿವೈಎಸ್ಪಿ ಧನ್ಯಾನಾಯ್ಕ ಅವರ ನೇತೃತ್ವದಲ್ಲಿ ನಡೆಸಲಾಗಿದ್ದು, ದಾಳಿಯ ವೇಳೆ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಇಂದು ಕಾರವಾರ ಮತ್ತು ಧಾರವಾಡ ಲೋಕಾಯುಕ್ತದ ಮೂರು ಪ್ರತ್ಯೇಕ ತಂಡಗಳು ಸೇರಿ ಈ ದಾಳಿಯನ್ನು ನಡೆಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
