ಸುದ್ದಿ ಕನ್ನಡ ವಾರ್ತೆ
ದಾಂಡೇಲಿ:ನಗರದಲ್ಲಿ ಶನಿವಾರ ಸಂಜೆ ಸುರಿದ ಭಾರಿ ಗುಡುಗು ಸಹಿತ ಮಳೆಗೆ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದ ಘಟನೆ ನಗರದ ಟೌನ್ಶಿಪ್ ಪ್ರದೇಶದಲ್ಲಿ ನಡೆದಿದೆ.
ನಗರದ ಟೌನ್ಶಿಪ್ನ ಶಂಕರಮಠದ ಹತ್ತಿರವಿರುವ ನಿವಾಸಿ ಎಸ್.ಪಿ. ನಾಯ್ಕ ಎಂಬುವವರ ಮನೆಯ ಆವರಣದಲ್ಲಿದ್ದ ತೆಂಗಿನ ಮರಕ್ಕೆ ಸಂಜೆಯ ವೇಳೆಗೆ ಸಿಡಿಲು ಬಡಿದಿದೆ. ಮಧ್ಯಾಹ್ನದಿಂದಲೇ ಆರಂಭವಾಗಿದ್ದ ಬಿರುಸಿನ ಗಾಳಿ ಮತ್ತು ಮಳೆಯ ನಡುವೆ ಇದ್ದಕ್ಕಿದ್ದಂತೆ ಸಿಡಿಲು ಬಡಿದ ಪರಿಣಾಮ ಮರಕ್ಕೆ ಬೆಂಕಿ ಹೊತ್ತಿಕೊಂಡಿತು.
ಮರ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು.
ಮಳೆ ನಿಂತ ಬಳಿಕ ಈ ಭಯಾನಕ ದೃಶ್ಯವನ್ನು ವೀಕ್ಷಿಸಲು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಜನನಿಬಿಡ ಪ್ರದೇಶದಲ್ಲೇ ಈ ಘಟನೆ ನಡೆದಿದ್ದರೂ, ಯಾವುದೇ ಪ್ರಾಣಾಪಾಯ ಅಥವಾ ಮನೆಗಳಿಗೆ ಹಾನಿ ಸಂಭವಿಸದಿರುವುದು ಸಮಾಧಾನದ ಸಂಗತಿಯಾಗಿದೆ.
