ಸುದ್ದಿ ಕನ್ನಡ ವಾರ್ತೆ
ಕಾರವಾರ:ನಗರದ ಪ್ರವಾಸಿ ಆಕರ್ಷಣೆಯಾದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಅಪರೂಪದ ಜಾತಿಯ ಕಡಲಾಮೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಡಲತೀರದ ಹನುಮಾನ್ ಮೂರ್ತಿಯ ಎದುರು ಭಾಗದ ಮರಳಿನಲ್ಲಿ ಈ ಕಡಲಾಮೆಯ ಕಳೆಬರಹ ಕಾಣಿಸಿಕೊಂಡಿದ್ದು, ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.

ಮೃತಪಟ್ಟ ಕಡಲಾಮೆಯು ಅತ್ಯಂತ ಅಪರೂಪದ ‘ಹಾಕ್ಸ್ ಬಿಲ್’ ತಳಿಗೆ ಸೇರಿದ್ದಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಗುರುತಿಸಿದ್ದಾರೆ. ಅಂದಾಜು 35 ರಿಂದ 40 ವರ್ಷ ಪ್ರಾಯದ ಈ ಕಡಲಾಮೆಯು ಸುಮಾರು ಎರಡು-ಮೂರು ದಿನಗಳ ಹಿಂದೆಯೇ ಸಮುದ್ರದಲ್ಲಿ ಮೃತಪಟ್ಟು, ಅಲೆಗಳ ಅಬ್ಬರಕ್ಕೆ ದಡಕ್ಕೆ ಬಂದು ಬಿದ್ದಿರುವ ಸಾಧ್ಯತೆಯಿದೆ. ಮೃತದೇಹವು ಕೊಳೆತ ಸ್ಥಿತಿಯಲ್ಲಿರುವುದರಿಂದ ಸಾವಿಗೆ ನಿಖರವಾದ ಕಾರಣ ಏನು ಎಂಬುದು ಸದ್ಯಕ್ಕೆ ನಿಗೂಢವಾಗಿದೆ.

ಈ ಅಪರೂಪದ ಕಡಲಾಮೆಯ ಸಾವಿನ ರಹಸ್ಯವನ್ನು ಭೇದಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಕುಂದಾಪುರದಿಂದ ಕಡಲ ಜೀವಿಗಳ ಸಂರಕ್ಷಣೆಯಲ್ಲಿ ಪರಿಣತಿ ಹೊಂದಿರುವ ತಜ್ಞ ಪಶುವೈದ್ಯರನ್ನು ಆಹ್ವಾನಿಸಲಾಗಿದೆ. ಬುಧವಾರ ಮಧ್ಯಾಹ್ನ ಈ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಆಮೆಯ ದೇಹದಲ್ಲಿ ಪ್ಲಾಸ್ಟಿಕ್ ಸೇರಿದಂತೆ ಯಾವುದಾದರೂ ವಿಷಕಾರಿ ಅಂಶಗಳಿವೆಯೇ ಅಥವಾ ಯಾಂತ್ರಿಕ ದೋಣಿಗಳಿಗೆ ಸಿಲುಕಿ ಮೃತಪಟ್ಟಿದೆಯೇ ಎಂಬುದು ವರದಿಯ ನಂತರವಷ್ಟೇ ಬಹಿರಂಗವಾಗಲಿದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಕಿರಣ್ ಮನ್ವಚಾರಿ ತಿಳಿಸಿದ್ದಾರೆ.
ಸಮುದ್ರದ ಪರಿಸರ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವ ಹಾಕ್ಸ್ ಬಿಲ್ ಕಡಲಾಮೆಗಳು ಅಳಿವಿನ ಅಂಚಿನಲ್ಲಿರುವ ಪ್ರಭೇದಗಳಾಗಿವೆ. ಕಾರವಾರದ ಕಡಲತೀರದಲ್ಲಿ ಇವು ಕಾಣಿಸಿಕೊಳ್ಳುವುದು ಅಪರೂಪವಾಗಿದ್ದು, ಅದರ ಸಾವು ಕಡಲ ಜೀವವೈವಿಧ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.