ಸುದ್ದಿ ಕನ್ನಡ ವಾರ್ತೆ
ಆತ್ಮಸ್ಥೈರ್ಯ ಮತ್ತು ದೃಢ ಸಂಕಲ್ಪ ಇದ್ದರೆ ಎಂತಹದ್ದೇ ಸವಾಲನ್ನು ಕೂಡ ಎದುರಿಸಬಹುದು ಎಂಬುದಕ್ಕೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಹತ್ತನೇ ತರಗತಿ ವಿದ್ಯಾರ್ಥಿ ಸಾಕ್ಷಿಯಾಗಿದ್ದಾನೆ. ಈತ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಕೂಡ ಆಕ್ಸಿಜನ್ ಸಿಲಿಂಡರ್ ನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾನೆ.
ಆಕ್ಸಿಜನ್ ಸಿಲಿಂಡರ್ ನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಯ ಹೆಸರು ಕೌಶಿಕ್. ಈತನು ಕಳೆದ ಹಲವು ದಿನಗಳಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆಕ್ಸಿಜನ್ ಸಿಲಿಂಡರ್ ಇಲ್ಲದಯೇ ಸದ್ಯ ಈತ ಸಹಜವಾಗಿ ಉಸಿರಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾನೆ. ಆದರೂ ಕೂಡ ತನ್ನ ಈ ಅನಾರೋಗ್ಯವು ತನ್ನ ಶಿಕ್ಷಣಕ್ಕೆ ಅಡ್ಡಿಯಾಗಬಾರದೆಂಬ ಛಲದಿಂದ ಆಕ್ಸಿಜನ್ ಸಿಲಿಂಡರ್ ನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದಿದ್ದಾನೆ.
ಬಡ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಕೌಶಿಕ್ ವೈದ್ಯಕೀಯ ಚಿಕಿತ್ಸೆಗೆ ದೊಡ್ಡ ಮೊತ್ತ ಖರ್ಚು ಮಾಡುವಷ್ಟು ಶಕ್ತಿಯು ಇಲ್ಲ ಎನ್ನಲಾಗಿದೆ. ಆದರೆ ಇಷ್ಟೊಂದು ಅನಾರೋಗ್ಯವಿದ್ದರೂ ಕೂಡ ಈತನು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಈತನಿಗೆ ಶ್ವಾಸಕೋಶದ ಕಸಿ ಮಾಡುವುದೊಂದೇ ಈತನ ಈ ಅನಾರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆದರೆ ಈ ದೊಡ್ಡ ಶತ್ರು ಚಿಕಿತ್ಸೆಗೆ ಸುಮಾರು 50 ಲಕ್ಷ ರು ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ.
