Banner Ad

ಸುದ್ದಿ ಕನ್ನಡ ವಾರ್ತೆ
ಕಾರವಾರ: ನಗರದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಗೋವಾದ ಪೋಳೆಂನಲ್ಲಿ ಬೈಕ್ ಅಪಘಾತಕ್ಕೀಡಾಗಿ, ಓರ್ವ ವಿದ್ಯಾರ್ಥಿ ದುರ್ಮರಣಕ್ಕೀಡಾದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. ಮೃತ ವಿದ್ಯಾರ್ಥಿಯನ್ನು ಚಿತ್ರದುರ್ಗ ಮೂಲದ, ಕಾರವಾರ ಮೆಡಿಕಲ್ ಕಾಲೇಜಿನ 3ನೇ ವರ್ಷದ ವಿದ್ಯಾರ್ಥಿ ಪ್ರೀತಂ ಎಂದು ಗುರುತಿಸಲಾಗಿದೆ. ಈ ದುರ್ಘಟನೆಯಲ್ಲಿ ಇನ್ನೊರ್ವ ವಿದ್ಯಾರ್ಥಿ ಬಸವರಾಜ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಹಿತಿಯ ಪ್ರಕಾರ, ಇಬ್ಬರು ವಿದ್ಯಾರ್ಥಿಗಳು ಊಟಕ್ಕಾಗಿ ಕಾರವಾರದಿಂದ ಗೋವಾದ ಪೋಳೆಂ ಕಡೆಗೆ ತೆರಳಿದ್ದರು. ತಡರಾತ್ರಿ ಊಟ ಮುಗಿಸಿ ವಾಪಸ್ ಕಾರವಾರದತ್ತ ಬರುತ್ತಿದ್ದ ವೇಳೆ, ಪೋಳೆಂ ವ್ಯಾಪ್ತಿಯ ಕೌಡ್ 9 ಹೋಟೆಲ್ ಬಳಿ ಈ ದುರ್ಘಟನೆ ಸಂಭವಿಸಿದೆ. ಹೆದ್ದಾರಿಯಲ್ಲಿ ಬೀದಿ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ, ಕತ್ತಲೆಯಲ್ಲಿ ರಸ್ತೆ ಸರಿಯಾಗಿ ಕಾಣದೆ ಬೈಕ್‌ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

Banner Ad

ವೈದ್ಯಕೀಯ ವೃತ್ತಿಯಿಂದ ಸಮಾಜ ಸೇವೆ ಮಾಡುವ ಕನಸು ಹೊತ್ತಿದ್ದ ಯುವಕನ ಅಕಾಲಿಕ ನಿಧನವು ಕಾಲೇಜು ಆವರಣದಲ್ಲಿ ಮತ್ತು ಅವರ ಕುಟುಂಬದಲ್ಲಿ ತೀವ್ರ ಶೋಕ ತಂದಿದೆ. ಘಟನೆಗೆ ಸಂಬಂಧಿಸಿದಂತೆ ಗೋವಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Banner Ad