ಸುದ್ದಿ ಕನ್ನಡ ವಾರ್ತೆ
ಚಿತ್ರದುರ್ಗ/ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ರವಿವಾರ ಮುಂಜಾನೆಯ ವೇಳೆ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಬೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ರಿಸರ್ವ್ ಸಬ್ ಇನ್ ಸ್ಪೆಕ್ಟರ್ (RSI) ಗಳು ಸ್ಥಳದಲ್ಲೇ ಮೃತಪಟ್ಟು,ಇನ್ನಿಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಅಪಘಾತದಲ್ಲಿ ಮಂಜುನಾಥ, ಅಂಬರೀಷ, ಸಚಿನ್ ಮೃತಪಟ್ಟ ರಿಸರ್ವ್ ಸಬ್ ಇನ್ ಸ್ಪೆಕ್ಟರ್ ಗಳಾಗಿದ್ದಾರೆ. ಕಾರಿನಲ್ಲಿದ್ದ ಪಿಎಸ್ಸೆ ಈಶ್ವರ ಹಾಗೂ ಆರ್ ಎಸ್ ಐ ಮಹಾಂತೇಶ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ಅಧಿಕಾರಿಗಳು ಬೆಂಗಳೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದ ವೇಳೆ ಹೆಗ್ಗೆರೆ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಈ ಬಗ್ಗೆ ಚಳ್ಳಕೆರೆ ತಾಲೂಕಿನ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
