ಸುದ್ದಿ ಕನ್ನಡ ವಾರ್ತೆ
ಮುಂಡಗೋಡ:ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲಿಹೊಂಡ ಗ್ರಾಮದಲ್ಲಿ ಆಕಸ್ಮಿಕವಾಗಿ ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ಸಂಭವಿಸಿದೆ.
ನಾಗಪ್ಪ ಯಲ್ಲಪ್ಪ ಅಲ್ಲಾಪುರ ಅವರ ಹುಲ್ಲಿನ ಬಣವೆಗೆ ಬೆಂಕಿ ತಗುಲಿದ್ದು, ಸುಮಾರು ಮೂರು ಟ್ರ್ಯಾಕ್ಟರ್ ಬತ್ತದ ಹುಲ್ಲು ಹಾಗೂ ಎರಡು ಟ್ರ್ಯಾಕ್ಟರ್ ಬಿಳಿ ಜೋಳದ ಸಿಪ್ಪೆ ಮತ್ತು ಎರಡು ಟ್ರ್ಯಾಕ್ಟರ್ ಹುರುಳಿಯ ಸಿಪ್ಪೆ ಸುಟ್ಟು ಹಾನಿ ಉಂಟಾಗಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ನಂದಿಸಲು ಹರಸಾಹಸ ಪಟ್ಟರೂ ನಿಯಂತ್ರಣಕ್ಕೆ ತರಲು ಸಾಧ್ಯವಾಗಲಿಲ್ಲ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಇಲಾಖೆಯ ಸಿಬ್ಬಂದಿ ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದರು. ಇದರಿಂದಾಗಿ ಬೆಂಕಿ ಅಕ್ಕಪಕ್ಕದ ಪ್ರದೇಶಗಳಿಗೆ ಹರಡುವುದು ತಪ್ಪಿದ್ದು, ಹೆಚ್ಚಿನ ಅನಾಹುತವನ್ನು ತಪ್ಪಿಸಿದಂತಾಗಿದೆ.
ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ, ಚಂದ್ರಪ್ಪ ಪೂಜಾರಿ, ಮಲ್ಲಿಕಾರ್ಜುನ ಮಲ್ಲೀಗವಾಡ, ಅಡಿವೆಪ್ಪ ಕುರುವಿನಕೊಪ್ಪ, ಅರುಣ್ ಮುಲಗೆ, ಸೋಮಶೇಖರ್ ಜೀವನವರ್ ಹಾಗೂ ರಾಹುಲ ಜಿಡ್ಡಿಮನಿ ಮುಂತಾದವರು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
