ಸುದ್ದಿ ಕನ್ನಡ ವಾರ್ತೆ

ಹುಬ್ಬಳ್ಳಿ: ನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ತಂಡಗಳ ರಣಜಿ ಟ್ರೋಫಿ ಪೈನಲ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್
ಶತಕದ ಹೊರತಾಗಿಯೂ ಕರ್ನಾಟಕ ತಂಡ, ಆಕಿಬ್ ಅಲಿ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿ 2025-26ರ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದ ಮೂರನೇ ದಿನವೂ ಕರ್ನಾಟಕ ತಂಡ ಹಿನ್ನಡೆಯನ್ನು ಅನುಭವಿಸಿದೆ. ಜಮ್ಮು ಮತ್ತು ಕಾಶ್ಮೀರ 584 ರನ್‌ಗಳಿಗೆ ಆಲ್‌ಔಟ್‌ ಆದ ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಕರ್ನಾಟಕ ತಂಡ, ಮೂರನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗಳ ನಷ್ಟಕ್ಕೆ 220 ರನ್‌ಗಳನ್ನು ಗಳಿಸಿದೆ. ಆ ಮೂಲಕ ಇನ್ನೂ 364 ರನ್‌ಗಳ ಹಿನ್ನಡೆಯಲ್ಲಿದ್ದು, ಸಂಕಷ್ಟಕ್ಕೆ ಸಿಲುಕಿದೆ.
ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲಿ ಗುರುವಾರ ಬೆಳಿಗ್ಗೆ 6 ವಿಕೆಟ್ ಕಳೆದುಕೊಂಡು 527 ರನ್‌ಗಳಿಂದ ಮೂರನೇ ದಿನದಾಟವನ್ನು ಆರಂಭಿಸಿದ ಜಮ್ಮು ಮತ್ತು ಕಾಶ್ಮೀರ ತಂಡ, ಮೊದಲನೇ ಸೇಷನಲ್ಲಿಯೇ 173.1 ಓವರ್‌ಗಳಿಗೆ 584 ರನ್‌ಗಳಿಗೆ ಆಲ್‌ಔಟ್ ಆಯಿತು. ಎರಡನೇ ದಿನ ಅರ್ಧಶತಕ ಗಳಿಸಿದ್ದ ಸಾಹಿಲ್ ಲೋಥಾ ಮೂರನೇ ದಿನ 72 ರನ್ ಗಳಿಸಿದ ಬಳಿಕ ಔಟ್ ಆದರು. ಅಬಿಬ್ ಮುಸ್ತಾಕ್ ಹಾಗೂ ಯಧುವೀ‌ರ್ ಸಿಂಗ್ ಚರಕ್ ಕ್ರಮವಾಗಿ 28 ರನ್ ಹಾಗೂ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಕರ್ನಾಟಕ ತಂಡದ ಪರ ಪ್ರಸಿದ್ ಕೃಷ್ಣ 98 ರನ್ ನೀಡಿ 5 ವಿಕೆಟ್‌ ಸಾಧನೆ ಮಾಡಿದರೆ, ವಿದ್ಯಾದರ್ ಪಾಟೀಲ್‌, ವೈಶಾಖ್ ವಿಜಯ್‌ಕುಮಾ‌ರ್, ಶ್ರೀಕರ್ ಶೆಟ್ಟಿ ಹಾಗೂ ಶ್ರೇಯಸ್ ಗೋಪಾಲ್ ತಲಾ ಒಂದೊಂದು ವಿಕೆಟ್ ಕಿತ್ತರು.ಬಳಿಕ ಪ್ರಥಮ ಇನಿಂಗ್ಸ್ ಅನ್ನು ಆರಂಭಿಸಿದ ಕರ್ನಾಟಕ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಮಯಾಂಕ್ ಅಗರ್ವಾಲ್ ಅವರ ಜೊತೆ ಇನಿಂಗ್ಸ್ ಆರಂಭಿಸಿ ಕೆಎಲ್ ರಾಹುಲ್ ಆಡಿದ 39 ಎಸೆತಗಳಲ್ಲಿ ಕೇವಲ 13 ರನ್‌ಗೆ ಆಕಿಬ್ ನಬಿಗೆ ವಿಕೆಟ್ ಒಪ್ಪಿಸಿದರು. ನಂತರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ನಾಯಕ ದೇವದತ್ ಪಡಿಕ್ಕಲ್ 11 ರನ್ ಗಳಿಸಿದ ಅವರನ್ನು ಸುನೀಲ್ ಕುಮಾರ್ ಔಟ್ ಮಾಡಿದರು. ನಂತರ ಆಕಿಬ್ ನಬಿ ತಮ್ಮ ಮಾರಕ ಬೌಲಿಂಗ್ ಮುಂದುವರಿಸಿ ಹಿರಿಯ ಬ್ಯಾಟ್ಸ್‌ಮನ್ ಕರುಣ್ ನಾಯರ್ ಹಾಗೂ ಸ್ಮರಣ್ ರವಿಚಂದ್ರನ್ ಅವರನ್ನು ಶೂನ್ಯಕ್ಕೆ ಪೆವಿಲಿಯನ್‌ಗೆ ಕಳುಹಿಸಿದರು. ಆ ಮೂಲಕ ಕರ್ನಾಟಕ ತಂಡ, 57 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು.ಕೆಎಲ್ ರಾಹುಲ್, ಕರುಣ್ ನಾಯರ್ ಸೇರಿದಂತೆ ಪ್ರಮುಖ ಐವರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡ ಕರ್ನಾಟಕ ತಂಡಕ್ಕೆ ಮಯಾಂಕ್ ಅಗರ್ವಾಲ್ ಆಸರೆಯಾಗಿದ್ದಾರೆ. ಅವರು ಇನಿಂಗ್ಸ್ ಆರಂಭಿಸಿದ ಬಳಿಕ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತರು. ಅವರು ಆಡಿದ 207 ಎಸೆತಗಳಲ್ಲಿ 17 ಬೌಂಡರಿಗಳೊಂದಿಗೆ ಅಜೇಯ 130 ರನ್ ಗಳಿಸಿದ್ದಾರೆ. ಆ ಮೂಲಕ ನಿರ್ಣಾಯಕ ಸಮಯದಲ್ಲಿ ಬಲಗೈ ಬ್ಯಾಟ್ಸ್‌ಮನ್ ಶತಕ ಕರ್ನಾಟಕ ತಂಡಕ್ಕೆ ಶ್ರೀರಕ್ಷೆಯಾಗಿದೆ. ಮತ್ತೊಂದು ತುದಿಯಲ್ಲಿ 75 ಎಸೆತಗಳಲ್ಲಿ ಅಜೇಯ 27 ರನ್ ಗಳಿಸಿರುವ ಕೃತಿಕ್ ಕೃಷ್ಣ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೂರನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 69 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 220 ರನ್ ಕಲೆ ಹಾಕಿದೆ ಹಾಗೂ ಇನ್ನೂ 364 ರನ್ ಹಿನ್ನಡೆಯಲ್ಲಿದೆ.
ಕರ್ನಾಟಕ ತಂಡ ಈಗಾಗಲೇ ಪ್ರಮುಖ ಐವರು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡಿದೆ. ಇದೀಗ ಉಳಿದಿರುವುದು ಮಯಾಂಕ್ ಹಾಗೂ ಕೃಷ್ಣ ಮಾತ್ರ. ಅಲ್ಲದೆ ಆತಿಥೇಯರು ಮುನ್ನಡೆ ಸಾಧಿಸಬೇಕಾದರೆ ಇನ್ನೂ 364 ರನ್ ಅಗತ್ಯವಿದೆ. ಹಾಗಾಗಿ ಪಡಿಕ್ಕಲ್ ಬಳಗಕ್ಕೆ ಮಯಾಂಕ್ ಹಾಗೂ ಕೃಷ್ಣ ಅವರಿಂದ ದೊಡ್ಡ ಜೊತೆಯಾಟದ ಅಗತ್ಯವಿದೆ. ಒಂದು ವೇಳೆ ಕರ್ನಾಟಕ ಪ್ರಥಮ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದರೆ, ಜಮ್ಮು ಮತ್ತು ಕಾಶ್ಮೀರ ಚೊಚ್ಚಲ ರಣಜಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆ.