ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರದ:ಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮದೇವಿಯರ ಜಾತ್ರಾ ಮಹೋತ್ಸವಕ್ಕೆ ಬುಧವಾರ ವಿವಿದೆಡೆಯಿಂದ ಅಸಂಖ್ಯಾತ ಭಕ್ತರು ಆಗಮಿಸಿದ್ದರು.ಆಕರ್ಷಕ ಜಾತ್ರಾ ಮಂಟಪದ ಗದ್ದುಗೆಯಲ್ಲಿ ವಿರಾಜಮಾನರಾದ ಗ್ರಾಮದೇವಿಯರ ದರ್ಶನ ಪಡೆದು ಭಕ್ತರು ನಾನಾ ಸೇವೆಗಳನ್ನು ಸಮರ್ಪಿಸಿದರು.
ಎಷ್ಟೇ ಜನರು ಬಂದರೂ ದೇವರ ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ದೇವಸ್ಥಾನದ ಆಡಳಿತ ಮಂಡಳಿಯವರ ವತಿಯಿಂದ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿದೆ. ಬುಧವಾರ ನಸುಕಿನಿಂದಲೇ ಸಾವಿರಾರು ಭಕ್ತರು ಸಾಲುಗಟ್ಟಿನಿಂತು ಗ್ರಾಮದೇವಿಯರ ದರ್ಶನ ಪಡೆದರು. ಬುಧವಾರ ಮಧ್ಯಾಹ್ನ ಹಾಗೂ ಸಂಜೆಯ ಸಮಯದಲ್ಲಿ ಹೆಚ್ಚಿನ ಜನರು ಆಗಮಿಸಿದ್ದರು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಬುಧವಾರ ಯಲ್ಲಾಪುರಕ್ಕೆ ಆಗಮಿಸಿ ಗ್ರಾಮದೇವಿಯರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಜಾತ್ರೆಯ ಪ್ರಾರಂಭದ ಎರಡು,ಮೂರು ದಿನ ವ್ಯಾಪಾರ ಇಲ್ಲದೇ ಆತಂಕಗೊಂಡಿದ್ದ ವ್ಯಾಪಾರಿಗಳು ಈಗ ಭರ್ಜರಿ ವ್ಯಾಪಾರವಾಗುತ್ತಿರುವುದರಿಂದ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ಇದ್ದಾರೆ.
ಜಾತ್ರಾ ಪೇಟೆಯಲ್ಲಿ ಹೆಚ್ಚಿನ ಜನರು ಓಡಾಡುತ್ತಿದ್ದು, ವಿವಿಧ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ. ಹೆಚ್ಚುತ್ತಿರುವ ವ್ಯಾಪಾರ, ವಹಿವಾಟಿನಿಂದಾಗಿ ದುಬಾರಿ ಬಾಡಿಗೆ ಹಣನೀಡಿ ವ್ಯಾಪಾರ ಮಾಡುತ್ತಿರುವ ಅಂಗಡಿಕಾರರು ಖುಷಿಗೊಂಡಿದ್ದಾರೆ. ವಾಯ್.ಟಿ.ಎಸ್.ಎಸ್.ಮೈದಾನ ಮತ್ತು ಶ್ರೀರಾಮ ರೆಸಿಡೆನ್ಸಿ ಸಮೀಪ ಇರುವ ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ಜನಜಂಗುಳಿ ಇದ್ದು, ಜನರು ಭರಪೂರ ಮನರಂಜನೆ ಪಡೆಯುತ್ತಿದ್ದಾರೆ. ಜಾತ್ರೆಗೆ ಆಗಮಿಸಿದ್ದ ಹಲವು ಜನರು ಜನಜಂಗುಳಿಯಲ್ಲಿ ತಮ್ಮ ಮೊಬೈಲ್, ಪರ್ಸ್, ಬ್ಯಾಗ್, ಹಣ, ಆಭರಣ ಮುಂತಾದ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದರು.
ಪೊಲೀಸರು ಅವುಗಳನ್ನು ವಾರಸುದಾರರಿಗೆ ಹುಡುಕಿಕೊಟ್ಟಿದ್ದಾರೆ.ಪಾಲಕರ ಕೈಯಿಂದ ತಪ್ಪಿಸಿಕೊಂಡಿದ್ದ ಚಿಕ್ಕಮಕ್ಕಳನ್ನು ಪೊಲೀಸರು ಹುಡುಕಿ ಪಾಲಕರ ಕೈಗೆ ಒಪ್ಪಿಸಿದ್ದಾರೆ. ಗುರುವಾರ ಜಾತ್ರಾಮಹೋತ್ಸವ ಕೊನೆಗೊಳ್ಳಲಿದ್ದು, ಮಧ್ಯಾಹ್ನ ಮಹಾಪೂಜೆಯ ನಂತರ ಗದ್ದುಗೆಯಿಂದ ಮುಂಡಗೋಡ ರಸ್ತೆಯ ಪಾದಗಟ್ಟಿಯವರೆಗೆ ಗ್ರಾಮದೇವಿಯರ ಮೆರವಣಿಗೆ ನಡೆಯಲಿದೆ.
