ಸುದ್ದಿ ಕನ್ನಡ ವಾರ್ತೆ
ಗೋಕರ್ಣ:ಕುಮಟಾ ತಾಲೂಕಿನ ಮಹಾಶಿವರಾತ್ರಿಯ ನಿಮಿತ್ತ ಗೋಕರ್ಣ ಮಹಾಬಲೇಶ್ವರ ದೇವರ ದರ್ಶನಕ್ಕೆ ಬಂದಿದ್ದ ಭಕ್ತರೊರ್ವರು ಕ್ಷೇತ್ರದಲ್ಲಿ ಶಿವರಾತ್ರಿ ದಿನವೇ ದೇವರ ದರ್ಶನ ಪಡೆದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ನಾರ್ತ್ ಗೋವಾ ನಿವಾಸಿ ರತ್ನಾಕರ ಸಾವಿಗೀಡಾದ ವ್ಯಕ್ತಿ. ಶಿವರಾತ್ರಿಯ ಹಿನ್ನೆಲೆ ಮಹಾಬಲೇಶ್ವರನ ದರ್ಶನ ಪಡೆಯಲೆಂದು ರತ್ನಾಕರ ಗೋಕರ್ಣ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ದೇವರ ಆತ್ಮಲಿಂಗದ ದರ್ಶನ ಪಡೆದು ಕ್ಷೇತ್ರದಿಂದ ಹೊರಕ್ಕೆ ತೆರಳಿದ ಬಳಿಕ ಅವರಿಗೆ ಹೃದಯಾಘಾತವಾಗಿದೆ.
ಅವರಿಗೆ ಈ ಹಿಂದೆ ಎರಡು ಬಾರಿ ಬೈಪಾಸ್ ಸರ್ಜರಿಯಾಗಿತ್ತು.ಕ್ಷೇತ್ರದಲ್ಲಿ ದೇವರ ದರ್ಶನದ ಬಳಿಕ ಹೃದಯಾಘಾತವಾದ ಕೂಡಲೇ ಸಿಪಿಐ ಶ್ರೀಧರರವರು ತಮ್ಮಪೊಲೀಸ್ ವಾಹನದಲ್ಲಿ ಮಲಗಿಸಿ ಗೋಕರ್ಣದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.
ಶಿವರಾತ್ರಿ ದಿನವೇ ಅದೂ ಕೂಡಾ ಪುರಾಣ ಪ್ರಸಿದ್ಧ ಮಹಾಬಲೇಶ್ವರನ ಕ್ಷೇತ್ರದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವುದರಿಂದ ಆತನಿಗೆ ಮುಕ್ತಿ ದೊರಕಿದೆ ಎಂದು ಸ್ಥಳೀಯರು ಆಡತೊಡಗಿದ್ದಾರೆ.ಈ ಬಗ್ಗೆ ಗೋಕರ್ಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
