ಸುದ್ಧಿಕನ್ನಡ ವಾರ್ತೆ
ಪಣಜಿ: ಕರ್ನಾಟಕದಿಂದ ಗೋವಾಕ್ಕೆ ಪರವಾನಗಿಯಿಲ್ಲದೆಯೇ 53 ಹಂದಿಗಳನ್ನು ಅಕ್ರಮವಾಗಿ ಸಾಗಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾದ ಸತ್ತಿಯಲ್ಲಿನ ಪ್ರಥಮ ದರ್ಜೆ ದಂಡಾಧಿಕಾರಿಗಳ ನ್ಯಾಯಾಲಯವು ಶನಿವಾರ ಜೀವನ್ ಶಿಪ್ರಿ (22,ಕರ್ನಾಟಕ) ಈ ಆರೋಪಿಗೆ 2050 ರೂಗಳ ದಂಡ ವಿಧಿಸಿದೆ. ಆರೋಪಿಯು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದರಿಂದ ಆರೋಪಿಗೆ ನ್ಯಾಯಾಲಯವು ಈ ದಂಡ ವಿಧಿಸಿದೆ.

ನ್ಯಾಯಾಧೀಶರಾದ ಪೂರ್ವಾ ನಾಯ್ಕ ರವರು ಭಾರತೀಯ ನ್ಯಾಯಸಂಹಿತೆ 2023 ರ ಕಲಂ 325 ರ 3(5) ಅನುಸಾರ ಪ್ರಾಣಿಗಳ ಬಗ್ಗೆ ಅಮಾನವೀಯವಾಗಿ ವರ್ತಿಸಿದ್ದರಿಂದ ಈ ದಂಡ ವಿಧಿಸಲಾಗಿದೆ. ಆರೋಪಿಯು ಮೂರು ದಿನಗಳಲ್ಲಿ ದಂಡ ಭರಿಸದಿದ್ದರೆ ಆರೋಪಿಗೆ ಒಂದು ತಿಂಗಳ ಸಾಧಾ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗಲಿದೆ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಈ ಘಟನೆಯು 27 ಜನವರಿ 2025 ರಂದು ಕೇರಿ-ಸತ್ತರಿ ಸೀಮಾ ತಪಾಸಣಾ ನಾಕೆಯಲ್ಲಿ ಬೆಳಕಿಗೆ ಬಂದಿತ್ತು. ಪೋಲಿಸರು ಎರಡು ವಾಹನಗಳನ್ನು ತಡೆಹಿಡಿದು ತಪಾಸಣೆ ನಡೆಸಿದಾಗ ಒಂದು ವಾಹನದಲ್ಲಿ 23 ಹಾಗೂ ಮತ್ತೊಂದು ವಾಹನದಲ್ಲಿ 30 ಹೀಗೆ ಒಟ್ಟೂ 53 ಜೀವಂತ ಹಂದಿಗಳನ್ನು ಅಮಾನವೀಯ ರೀತಿಯಲ್ಲಿ ತುಂಬಿ ಕರ್ನಾಟಕದಿಂದ ಗೋವಾಕ್ಕೆ ತರಲಾಗಿತ್ತು. ತಪಾಸಣೆ ನಡೆಸಿದಾಗ ಆರೋಪಿಯ ಬಳಿ ಯಾವುದೇ ಪರವಾನಗಿ ಇಲ್ಲದಿರುವುದು ಬೆಳಕಿಗೆ ಬಂದಿತ್ತು.
ನ್ಯಾಯಾಲಯದಲ್ಲಿ ಆರೋಪಿಗೆ ಸಂಭಾವ್ಯ ಶಿಕ್ಷೆಯ ಬಗ್ಗೆ ಮಾಹಿತಿ ನೀಡುತ್ತಿದ್ದಂತೆಯೇ ಆರೋಪಿಯು ಕೂಡಲೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ. ಇದರಿಂದಾಗಿ ನ್ಯಾಯಾಲಯವು ಈ ಪ್ರಕರಣದಲ್ಲಿ ಆರೋಪಿಗೆ ದಂಡ ವಿಧಿಸಿ ತನ್ನ ತೀರ್ಪು ಪ್ರಕಟಿಸಿದೆ.