ಸುದ್ದಿ ಕನ್ನಡ ವಾರ್ತೆ

ಶಿರಸಿ: ಬೌದ್ಧಿಕ ಜಿಲ್ಲೆಯಲ್ಲಿ ಅನಂತಮೂರ್ತಿ ಹೆಗಡೆ ಅವರು ರಾಜಕೀಯ, ಸಾಮಾಜಿಕ ಎಲ್ಲಾ ಕ್ಷೇತ್ರಕ್ಕೂ ಅಪವಾದವಾದಂತೆ ಆಗಿದ್ದಾರೆ. ಅವರು ಇಲ್ಲ‌ ಸಲ್ಲದ‌ ಆರೋಪ‌ವನ್ನು ಜನಮಿಡಿತ ಅರಿತ ಶಾಸಕ ಭೀಮಣ್ಣ‌ ನಾಯ್ಕ ಅವರ ಮೇಲೆ‌‌ ಮಾಡುತ್ತಿರುವದೇ ಇದಕ್ಕೆ‌ ಸಾಕ್ಷಿ. ಶಿರಸಿ ಆಸ್ಪತ್ರೆ ಬಗ್ಗೆ ಆಚಾರ ಹೇಳಿ ಪ್ರಚಾರ ಬಯಸುವುದು ಶೋಭೆಯಲ್ಲ ಎಂದು ಕೆಪಿಸಿಸಿ ಸದಸ್ಯ ದೀಪಕ ಹೆಗಡೆ ದೊಡ್ಡೂರು ವಾಗ್ದಾಳಿ‌ ನಡೆಸಿದರು.

ಮಂಗಳವಾರ ಜಿಲ್ಲಾ ಪತ್ರಿಕಾ‌ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಕಾಗೇರಿ ಅವರ ಅವಧಿಯಲ್ಲಿ ಅನುಷ್ಠಾನವಾದ ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆ‌ಮೇಲ್ದರ್ಜೆಗೆ ಏರಿಸುವ ಆಸ್ಪತ್ರೆ ಕಟ್ಟಡ ಕಾಮಗಾರಿ ೨೦೨೦ರಿಂದ ನಡೆದಿದೆ. ಆಗ ೩೦ ಕೋಟಿ ರೂ ಬಂದಿದ್ದರೆ, ಕಳೆದ ಒಂದುವರೆ ವರ್ಷದಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರು ೪೪ಕೋ.ರೂ. ಅನುದಾನ ಕೊಡಿಸಿದ್ದಾರೆ. ಇನ್ನು ಕೇವಲ‌ ೧ ಕೋ.ರೂ.ಬಾಕಿ ಇದೆ. ಸರಕಾರಿ ವ್ಯವಸ್ಥೆಯಲ್ಲಿ ಕಾಮಗಾರಿ ಆದಂತೆ‌ ಬರಲಿದೆ ಎಂದರು.

ತಮ್ಮ ಸ್ವಂತ ಟಿ.ಆರ್.ಪಿ. ಗಾಗಿ ಅನಾವಶ್ಯಕವಾಗಿ, ಮಾಹಿತಿ ಇಲ್ಲದೇ ಮಾತನಾಡುವುದನ್ನು ಅನಂತಮೂರ್ತಿ ಹೆಗಡೆ ಬಿಡಬೇಕು. ಭೀಮಣ್ಣ ನಾಯ್ಕ ಜನಸ್ನೇಹಿ ಶಾಸಕರು. ಅವರ ಸಲಹೆ ಸೂಚನೆ ಇದ್ದಲ್ಲಿ ನೇರವಾಗಿ ಶಾಸಕರ ಬಳಿ ಬಂದು ಮಾತನಾಡಬೇಕು. ಅದರ ಬದಲಿಗೆ ಗೊಂದಲ ಸೃಷ್ಟಿ ಮಾಡಿ, ಮಾಹಿತಿ ಕೊರತೆ ಮಾಡಿಕೊಂಡು ಪದೇ ಪದೇ ಮಾಧ್ಯಮ ಹೇಳಿಕೆ ನೀಡುವುದನ್ನು ಬಿಡಲಿ ಎಂದು ಸಲಹೆ ಮಾಡಿದರು.‌

ಅನಂತಮೂರ್ತಿ ಹೆಗಡೆ ಅವರಿಗೆ ಆಡಳಿತ ಬಗ್ಗೆ ಮಾಹಿತಿ ಸಿಗಬೇಕಿದೆ. ರಾತ್ರಿ ಬೆಳಿಗ್ಗೆವರೆಗೆ ಯಾವುದೂ ಆಗುವುದಿಲ್ಲ. ರಾಜಕೀಯ ಲಾಭಕ್ಕಾಗಿ ಮಾಡುವ ಸುಳ್ಳು ಆರೋಪಗಳನ್ನು‌ ಅನಂತಮೂರ್ತಿ ಹೆಗಡೆ ಅವರು ಕೈ ಬಿಡಬೇಕು. ಸರಿಯಾದ ಗುರಿ ಹಾಗೂ ಗುರುವನ್ನು ಇಟ್ಟುಕೊಂಡು ಅವರು ಕೆಲಸ ಮಾಡಲಿ, ಮಾತನಾಡಲಿ ಎಂದ ದೊಡ್ಡೂರು, ಶಿರಸಿ ಕುಮಟಾ, ಶಿರಸಿ ಹಾವೇರಿ ರಸ್ತೆ ಕಾಮಗಾರಿ ಕೂಡ ಒಂದೇ ವರ್ಷದಲ್ಲಿ ಆಗಿಲ್ಲವಲ್ಲ. ಅಂಥ ಉಮೇದಿದ್ದರೆ ಅದರ ಬಗ್ಗೂ ಮಾತನಾಡಲಿ ಎಂದರು.

ಈ ವೇಳೆ ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಸಿಎಂಸಿ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ, ಪ್ರಮುಖರಾದ ನಾಗರಾಜ ಮಡಿವಾಳ, ಬಸವರಾಜ ದೊಡ್ಮನಿ, ಜ್ಯೋತಿ ಗೌಡ ಪಾಟೀಲ್, ಜಬಿವುಲ್ಲಾ ಖಾನ್, ಜಾಫೀ ಪೀಟರ್, ಮಧುಕರ ಬಿಲ್ಲವ, ರಘು ಕಾನಡೆ‌, ಮಹದೇವ ಚೆಲುವಾದಿ ಇತರರು ಇದ್ದರು.

 

ಕಳೆದ ಸರ್ಕಾರ ಆಸ್ಪತ್ರೆ ಮಂಜೂರು ಮಾಡುವ ಸಂದರ್ಭದಲ್ಲಿ ಶಿರಸಿ ಆಸ್ಪತ್ರೆಗೆ ನೀಡಿದ ಅನುದಾನ ಸಂಪೂರ್ಣವಾಗಿ ತರುವಲ್ಲಿ ಪ್ರಯತ್ನ ಮಾಡುತ್ತೇವೆ. ಯಂತ್ರೋಪಕರಣಗಳಿಗೂ ಸಂಬಂಧಪಟ್ಟ ಅನುದಾನ ಸಿಗಲಿದೆ ಹಾಗೂ ಆಸ್ಪತ್ರೆ ಕಾಮಗಾರಿ ಶೀಘ್ರ ಪೂರ್ಣವಾಗಲಿದೆ.
– ದೀಪಕ ದೊಡ್ಡುರು, ಕೆಪಿಸಿಸಿ ಸದಸ್ಯ

ಆಸ್ಪತ್ರೆಯ ಕಾಮಗಾರಿಯು ೨೦೨೦ ರಲ್ಲಿ ಆರಂಭವಾದರೂ ಹಳೆ ಕಟ್ಟಡ ತೆರವು ಕಾರ್ಯಾಚರಣೆ ಎಲ್ಲವೂ ಮುಗಿದು ೨೦೨೩ ರ ವೇಳೆಗೆ ಕೆಲಸ ಆರಂಭವಾಗಿದೆ. ಜೊತೆಗೆ ಅಗತ್ಯವಿರುವ ಅನುದಾನವನ್ನು ತರಲು ಶಾಸಕ ಭೀಮಣ್ಣ ಅವರು ಶ್ರಮಿಸಿದ್ದಾರೆ.
– ಪ್ರದೀಪ ಶೆಟ್ಟಿ, ಮಾಜಿ ಅಧ್ಯಕ್ಷರು, ನಗರಸಭೆ, ಶಿರಸಿ

 

ಶಿರಸಿ ಹಳೆ ಬಸ್ ನಿಲ್ದಾಣದ ಹೊಸ‌ ಕಟ್ಟಡ, ಇಂದಿರಾ ಕ್ಯಾಂಟೀನ್ ಶೀಘ್ರ ಉದ್ಘಾಟನೆ ಆಗಲಿದೆ.
ಜಗದೀಶ ಗೌಡ, ಅಧ್ಯಕ್ಷರು ಯೋಜನಾ ಪ್ರಾಧಿಕಾರ, ಶಿರಸಿ.