ಸುದ್ದಿ ಕನ್ನಡ ವಾರ್ತೆ

ದಾಂಡೇಲಿ : ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಆಶ್ರಯದಡಿ ನಗರದ ಡಿ.ಎಫ್.ಎ ಮೈದಾನದಲ್ಲಿ ಆಯೋಜಿಸಲಾಗಿದ್ದ ದಾಂಡೇಲಿ ಪ್ರೀಮಿಯರ್ ಲೀಗ್ -ಸೀಸನ್ : 5 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಗೆ ಸಂಭ್ರಮಯುತವಾಗಿ ಚಾಲನೆಯನ್ನು ನೀಡಲಾಯಿತು.
ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ದೀಪ ಬೆಳಗಿಸಿ ಡಿಪಿಎಲ್ : 5 ರ ಆವೃತ್ತಿಗೆ ಚಾಲನೆಯನ್ನು ನೀಡಿ ಮಾತನಾಡುತ್ತಾ, ಈ ಪಂದ್ಯಾವಳಿಯನ್ನು ರಾಜ್ಯ, ರಾಷ್ಟ್ರಮಟ್ಟದ ಪಂದ್ಯಾವಳಿಯ ರೀತಿ ಆಯೋಜಿಸಲಾಗಿದೆ. ಪಂದ್ಯಾವಳಿಯ ಆಯೋಜನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಕ್ರಿಕೆಟ್ ಪಂದ್ಯಾವಳಿ ಆಯೋಜನೆಯಾಗುವ ರೀತಿಯಲ್ಲಿ ಸಂಘಟಿಸಲಾಗಿರುವುದು ಸಂತಸ ತಂದಿದೆ. ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯವರು ಕೊಟ್ಟ ಮಾತಿನಂತೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದರ ಜೊತೆಗೆ, ದಾಂಡೇಲಿ ಕ್ರಿಕೆಟ್ ಅಕಾಡೆಮಿಯನ್ನು ಪ್ರಾರಂಭಿಸಿ ಸ್ಥಳೀಯ ಮಕ್ಕಳ ಕ್ರೀಡಾ ಭವಿಷ್ಯದ ಉನ್ನತಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಮಹಿಳೆಯರಿಗೂ ದಾಂಡೇಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ನಡೆಯುವಂತಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ ಅವರು ರಾಷ್ಟ್ರ, ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವ ರೀತಿಯಲ್ಲಿ ಇಲ್ಲಿ ಮೈದಾನವನ್ನು ಅಣಿಗೊಳಿಸ ಲಾಗಿದೆ. ಶ್ರಮ, ಹಣ ಹಾಗೂ ಇದಕ್ಕಾಗಿ ತಿಂಗಳುಗಟ್ಟಲೆ ಸಮಯ‌ ಮೀಸಲಿರಿಸಿ ದಾಂಡೇಲಿ ಜನತೆಗೆ ಕ್ರೀಡಾ ರಸದೌತಣವನ್ನು ಉಣ ಬಡಿಸುತ್ತಿರುವ ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಪದಾಧಿ ಕಾರಿಗಳ‌ ಮತ್ತು ಸದಸ್ಯರ ಸಂಘಟನಾತ್ಮಕವಾದ ಈ ಕಾರ್ಯ ಅತ್ಯಂತ ಸ್ಮರಣೀಯವಾಗಿದೆ. ಇದು ದಾಂಡೇಲಿಯ ಕ್ರಿಕೆಟ್ ಪ್ರತಿಭೆಗಳ ಉಜ್ವಲ ಬದುಕಿಗೆ ಪ್ರೇರಣಾದಾಯಿಯಾಗಿದೆ ಎಂದು ಹೇಳಿ ಪಂದ್ಯಾವಳಿಗೆ ಶುಭವನ್ನು ಕೋರಿದರು.
ಮ್ಯಾಗ್ನೆಟಾ ಐಸ್ ಕ್ರೀಮ್ ಕಂಪನಿ ಮಾಲೀಕ ದಿಗ್ವಿಜಯ ಸಿದ್ನಾಳ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಪದಾಧಿಕಾರಿಗಳ ಮತ್ತು ಸದಸ್ಯರ ಕ್ರೀಡಾ ಪ್ರೇಮ ಅತ್ಯಂತ ಅಭಿನಂದನೀಯ. ತಮ್ಮೆಲ್ಲ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗಿಟ್ಟು ದಾಂಡೇಲಿಯ ಜನತೆಗಾಗಿ ಒಂದು ಅತ್ಯದ್ಭುತ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ದಾಂಡೇಲಿ ಪ್ರೀಮಿಯರ್ ಲೀಗ್ ತನ್ನ ಸಂಘಟನಾ ಶಕ್ತಿಯನ್ನು ಸಾದರಪಡಿಸಿದೆ ಎಂದರು. ಇಂತಹ ಮೇರು ಪಂದ್ಯಾವಳಿಯಲ್ಲಿ ನಮ್ಮ ಸಂಸ್ಥೆಯು ಸಹಭಾಗಿತ್ವವನ್ನು ಹೊಂದಿರುವುದು ನಮ್ಮ ಸಂಸ್ಥೆಯ ಮೇಲಿನ ಅಭಿಮಾನ ಮತ್ತು ಗೌರವ ಇಮ್ಮಡಿಯಾಗಿದೆ ಎಂದರು.
ನಗರಸಭೆಯ ಪೌರಾಯುಕ್ತ ವಿವೇಕ್ ಬನ್ನೆ , ಡಿವೈಎಸ್ಪಿ ಶಿವಾನಂದ ಮದರಕಂಡಿ ಮತ್ತು ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಅಧ್ಯಕ್ಷರು ಹಾಗೂ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಸದಸ್ಯರಾದ ಅನಿಲ್ ಪಾಟ್ನೇಕರ ಅವರು ಮಾತನಾಡಿ .ದಾಂಡೇಲಿ ಜನತೆಯ ಸಹಕಾರದಿಂದ ಪಂದ್ಯಾವಳಿ ಯಶಸ್ವಿಯಾಗಿ ನಡೆಯುತ್ತಿ ರುವುದಕ್ಕೆ ಹೆಮ್ಮೆಪಾಡುತ್ತೇವೆ ಎಂದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಹಣಕಾಸು ವಿಭಾಗದ ಹಿರಿಯ ಉಪಾಧ್ಯಕ್ಷ ಅಶೋಕ್ ಶರ್ಮಾ, ಪಿಎಸ್ಐ ಅಮೀನ್ ಅತ್ತಾರ, ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಲದೀಪ್ ಸಿಂಗ್ ರಜಪೂತ್ ಹಾಗೂ ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಪದಾಧಿಕಾರಿಗಳು ಮತ್ತು 8 ಪ್ರಾಂಚೈಸಿ ತಂಡಗಳ ಮಾಲಕರು ಉಪಸ್ಥಿತರಿದ್ದರು.
ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಉಪಾಧ್ಯಕ್ಷ ಇಮಾಮ್ ಸರ್ವರ್ ಸ್ವಾಗತಿಸಿದರು.ಕೋಶಾಧಿಕಾರಿ ಸಚಿನ್ ಕಾಮತ್ ವಂದಿಸಿದರು. ಸುರೇಶ ಕಾಮತ್ ನಿರೂಪಿಸಿದರು.
ಸಭಾಕಾರ್ಯಕ್ರಮ ಮುಗಿದ.ಬಳಿಕ ದಾಂಡೇಲಿ ಪ್ರೆಸ್ ವಾರಿಯರ್ಸ್ ಮತ್ತು ದಾಂಡೇಲಿ ಪ್ರೀಮಿಯರ್ ಲೀಗ್ ಕಮಿಟಿ ತಂಡಗಳ ನಡುವೆ ಹೊನಲುಬೆಳಕಿನಲ್ಲಿ ಪ್ರದರ್ಶನ ಪಂದ್ಯವು ಜರುಗಿತುಈ ಪಂದ್ಯಾವಳಿ ಯಲ್ಲಿ ದಾಂಡೇಲಿ ಪ್ರೆಸ್ ವಾರಿಯರ್ಸ್ ತಂಡ ಗೆಲುವು ಸಾಧಿಸಿತು.