ಸುದ್ದಿ ಕನ್ನಡ ವಾರ್ತೆ
“ಸಂಖ್ಯೆಗಳ ಅಲೆದಾಟ ಸೂತ್ರಗಳ ಜಗತ್ತು, ಶೂನ್ಯದಿಂದ ಅನಂತದವರೆಗಿನ ಅದ್ಭುತ ಪಯಣವೇ ಗಣಿತ”
“ಅಣುವಿನಿಂದ ಬ್ರಹ್ಮಾಂಡದ ವಿಸ್ತಾರದೆಡೆಗೆ ಸತ್ಯಶೋಧನೆಯ ಆವಿಷ್ಕಾರವೇ ವಿಜ್ಞಾನ”
ಗಣಿತವು ಸಂಖ್ಯೆಗಳ ಮತ್ತು ಆಕಾರಗಳ ಮೂಲಕ ತಾರ್ಕಿಕ ರಚನೆಯನ್ನು ನೀಡಿದರೆ, ವಿಜ್ಞಾನವು ಪ್ರಯೋಗಗಳ ಮೂಲಕ ಪ್ರಕೃತಿಯ ರಹಸ್ಯವನ್ನು ತೆರೆದಿಡುತ್ತದೆ. ಹೀಗೆ ಒಂದೇ ನಾಣ್ಯದ ಎರಡು ಮುಖಗಳಂತಿರುವ ಗಣಿತ ಹಾಗೂ ವಿಜ್ಞಾನವು ಮಾನವನ ಪ್ರಗತಿಗೆ ಬುನಾದಿಯಾಗಿದೆ. ಇಂತಹ ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಮಕ್ಕಳು ಆಸಕ್ತಿ ಹೊಂದಿ ಅವರಲ್ಲಿ ತಾರ್ಕಿಕ ಮತ್ತು ವೈಜ್ಞಾನಿಕ ಆಲೋಚನೆಯನ್ನು ಬೆಳಸಬೇಕೆಂಬ ಉದ್ದೇಶದಿಂದ “ರಾಷ್ಟ್ರೀಯ ಆವಿಷ್ಕಾರ” ಯೋಜನೆಯಡಿಯಲ್ಲಿ ಗಣಿತ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಸ್ಪರ್ಧಾ ಕಾರ್ಯಕ್ರಮವನ್ನು ಪಿಎಂಶ್ರೀ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಜೋಯಿಡಾದಲ್ಲಿ, ಫೆಬ್ರವರಿ 4, 2026 ರಂದು ಹಮ್ಮಿಕೊಳ್ಳಲಾಗಿತ್ತು.
ಗಣಿತದ ವಿವಿಧ ಆಕೃತಿಗಳಲ್ಲಿ ದೀಪ ಬೆಳಗಿಸುವುದರೊಂದಿಗೆ ಗಣಿತ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಅಂತೆಯೇ ವಿಜ್ಞಾನ ವಸ್ತು ಪ್ರದರ್ಶನ ಎನ್ನುವ ಬೋರ್ಡನ್ನು ಪ್ರತ್ಯಾಮ್ಲ ಮತ್ತು ಸೂಚಕ ಬಳಸಿ ಅನಾವರಣ ಮಾಡುವುದರೊಂದಿಗೆ , ರೋಬೋಟ್ ಮಾದರಿಯನ್ನು ಅನಾವರಣ ಮಾಡುವುದರೊಂದಿಗೆ, ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಜೊಯಿಡಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಚಂದ್ರಿಮಾ ಮಿರಾಶಿ, ಉಪಾಧ್ಯಕ್ಷರಾದ ಶ್ರೀ ಸಂತು ಮಂಥೇರೋ, ತಾಲೂಕಿನ ಶಿಕ್ಷಣ ಸಂಯೋಜಕರಾದ ಶ್ರೀ ಪರಮೇಶ್ವರ್ ಹರಿಕಂತ್ರ, ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಯಶವಂತ್ ನಾಯ್ಕ, ಶ್ರೀರಾಮ್ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀ ಗಿರೀಶ್ ಕೋಟೆಮನೆ, ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಶ್ಯಾಮ್ ಪೋಕಳೆ, ಉಪಾಧ್ಯಕ್ಷರಾದ ಶ್ರೀಮತಿ ಭವಾನಿ ಚೌಹಾನ್, ಮತ್ತು ಸರ್ವ ಸದಸ್ಯರು ಕಾರ್ಯಕ್ರಮಕ್ಕೆ ಹಾಜರಿದ್ದು, ಮಕ್ಕಳ ಎಲ್ಲ ಮಾದರಿಯನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಹಾಗೆಯೇ ಸಮೀಪದ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಬಂದು ಮಕ್ಕಳ ಮಾದರಿಯನ್ನು ವೀಕ್ಷಿಸಿದರು. ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳು ತಯಾರಿಸಿದ ಸಂಖ್ಯೆಗಳ ಆಟ, ಆಕೃತಿಗಳು, ಸೂತ್ರಗಳ ಆಧಾರಿತ ಗಣಿತ ಮಾದರಿಗಳು, ಹಾಗೆಯೇ ಹೃದಯದ ಮಾದರಿ, ರೋಬೋಟ್, ಹೆಲಿಕಾಪ್ಟರ್, ರಾಕೆಟ್, ಸೂಪಾ ಜಲವಿದ್ಯುತ್ ಯೋಜನೆ ಮುಂತಾದ ಕಾರ್ಯನಿರತ ವಿಜ್ಞಾನದ ಮಾದರಿಗಳು ವೀಕ್ಷಕರ ಗಮನ ಸೆಳೆದವು. ಶಾಲೆಯಲ್ಲಿ ಶಿಕ್ಷಕರು ಹಾಗೂ ಪಾಲಕ – ಪೋಷಕರು ಈ ಕಾರ್ಯಕ್ರಮದಲ್ಲಿ ಹಾಜರಿದ್ದು ತಮ್ಮ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿದರು. ಅತ್ಯುತ್ತಮ ಮಾದರಿಗಳನ್ನು ಆಯ್ಕೆ ಮಾಡಿ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
