ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ಪಟ್ಟಣದ ಫೆ. 11ರಿಂದ 19 ರವರೆಗೆ ನಡೆಯಲಿರುವ
ಗ್ರಾಮದೇವಿ ಜಾತ್ರೆಯ ಹಿನ್ನೆಲೆಯಲ್ಲಿ ಮೂರನೇಯ ಹೊರ ಮಂಗಳವಾರವನ್ನು ಶ್ರದ್ದಾಭಕ್ತಿಯಿಂದ ಯಶಸ್ವಿಯಾಗಿ ಆಚರಿಸಲಾಯಿತು. ಇದು ಕೊನೆಯ ಹೊರ ಮಂಗಳವಾರವಾಗಿದ್ದು, ಮುಂದಿನ ಮಂಗಳವಾರ ಅಂಕೆ ಹಾಕುವುದು, ಗ್ರಾಮದೇವಿ ವಿವಾಹ ಮಹೋತ್ಸವ ಮುಂತಾದ ಜಾತ್ರಾ ವಿಧಿ ವಿಧಾನಗಳು ಪ್ರಾರಂಭವಾಗಲಿದೆ.
ಜಾತ್ರೆಯ ಹಿನ್ನೆಲೆಯಲ್ಲಿ ಪಟ್ಟಣದ ಬೀದಿಗಳ ಅಲಂಕಾರ, ಜಾತ್ರಾಗದ್ದುಗೆಯಲ್ಲಿ ಜಾತ್ರಾ ಮಂಟಪಗಳ ಸಿದ್ದತೆ ಭರದಿಂದ ಸಾಗಿದೆ. ಪಟ್ಟಣದ ನಿವಾಸಿಗಳು ಬೆಳಗ್ಗೆ 10 ರೊಳಗೆ ಮಧ್ಯಾಹ್ನದ ಊಟ ಸಿದ್ಧಪಡಿಸಿಕೊಂಡು ಪ್ರತಿ ಮನೆಗಳಲ್ಲಿ ದೇವರ ಪೂಜೆ ಸಲ್ಲಿಸಿ, ದೀಪ ಹಚ್ಚಿಟ್ಟು, ನೈವೇದ್ಯ ಇಟ್ಟು ಮನೆಯ ಬಾಗಿಲು ಹಾಕಿ ಹೊರಬೀಡಾಗಿ ಆಚರಿಸಿದರು.

ಪಟ್ಟಣದ ಐಬಿ ಉದ್ಯಾನವನ, ಎಪಿಎಂಸಿ ಬಳಿಯ ಪಾರ್ಕ್ ಗಳಲ್ಲಿ ಜನ ಸಂಜೆಯವರೆಗೆ ಸಮಯ ಕಳೆದರು. ಕವಡಿಕೆರೆ, ಜೇನುಕಲ್ಲುಗುಡ್ಡ, ಮಾಗೋಡ ಜಲಪಾತ, ಸಾತೊಡ್ಡಿ ಜಲಪಾತ, ಚಂದಗುಳಿ ಘಂಟೆ ಗಣಪತಿ ದೇವಸ್ಥಾನ ಮುಂತಾದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಪಟ್ಟಣ ಸಂಪೂರ್ಣ ಸ್ತಬ್ದವಾಗಿದ್ದು, ಅಂಗಡಿ ಮುಂಗಟ್ಟುಗಳೆಲ್ಲಾ ಬಂದ್ ಆಗಿತ್ತು. ಜನರ, ವಾಹನಗಳ ಓಡಾಟ ವಿರಳವಾಗಿತ್ತು. ಗ್ರಾಮೀಣ ಭಾಗದ ಜನ ಪೇಟೆಯತ್ತ ಬರಲಿಲ್ಲ. ಈ ಬಾರಿ ಮೂರು ಹೊರ ಮಂಗಳವಾರ ಆಚರಣೆಯಲ್ಲಿ ಸಂಪನ್ನವಾಗಿದೆ. ಇನ್ನು ಈ ವಿಶಿಷ್ಟ ಆಚರಣೆಗೆ ಮುಂದಿನ ಜಾತ್ರೆಯವರೆಗೆ ಅಂದರೆ, ಇನ್ನು ಮೂರು ವರ್ಷ ಕಾಯಬೇಕಿದೆ.