ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಸಮೂಹ ಸಂಪನ್ಮೂಲ ಕೇಂದ್ರ ರಾಮನಗರ, ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ,ಶಿಂದೋಳಿ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಶಿಂದೋಳಿ ಇವರ ಸಂಯುಕ್ತಾಶ್ರಯದಲ್ಲಿ 2025-26 ನೇ ಸಾಲಿನ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ದಿನಾಂಕ:31ಜನವರಿ 2026 ರ ಶನಿವಾರ ಸಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಂದೋಳಿಯಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಸುಶ್ರಾವ್ಯವಾದ ಪ್ರಾರ್ಥನೆ ಶಾಲೆಯ ವಿದ್ಯಾರ್ಥಿಗಳಾದ ಸಂಪದಾ ಸಂಗಡಿಗರಿಂದ ನಡೆಯಿತು.ಸ್ವಾಗತ ಗೀತೆ ಮಾನವಿ ಸಂಗಡಿಗರಿಂದ ನಡೆಯಿತು.ನಂತರ ಗ್ರಾಮದ ಮಿರಾಶಿಗಳಾದ ಯೋಗೇಶ ಗಾವಡೆಯವರು ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜಾ ಕಾರ್ಯಕ್ರಮದ ಮೂಲಕ ಚಾಲನೆ ನೀಡಿದರು.ಶಾಲೆಯ ಹಿರಿಯ ಸದಸ್ಯರಾದ ತುಕಾರಾಮ ಠಾಕೂರ ಸಹಕಾರ ನೀಡಿದರು. ವೇದಿಕೆಯ ಮೇಲಿನ ಗಣ್ಯರನ್ನು ವಿದ್ಯಾರ್ಥಿಗಳಿಂದ ಪುಷ್ಪ ನೀಡುವ ಮೂಲಕ ಆತ್ಮೀಯವಾಗಿ ಶಿಂದೋಳಿ ಶಾಲೆಯ ಕ್ರೀಯಾಶೀಲ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ ಎಲ್ಲರನ್ನೂ ಉದ್ದೇಶಿಸಿ ಕಾರ್ಯಕ್ರಮದ ಮಾತನಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಮನಗರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳು ಹಾಗೂ ಹನುಮಾನಲೇನ್ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನ ಸರ್ ರವರು ವಾರ್ಷಿಕ ಸ್ನೇಹ ಸಮ್ಮೇಳನವು ಶಾಲೆಯ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಹೊರ ಪ್ರದರ್ಶಿಸಲು ಇರುವಂತಹ ವೇದಿಕೆ.ರಾಮನಗರ ಕ್ಲಸ್ಟರಿನ ವ್ಯಾಪ್ತಿಯ ಶೈಕ್ಷಣಿಕ ವಿಭಾಗದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ತಾಲೂಕಿನ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದ್ದು,ಸಾರ್ವಜನಿಕ ಶಿಕ್ಷಣ ಇಲಾಖೆಯ ಹಾಗೂ ಶಿಂದೋಳಿ ಶಾಲೆಯ ಕೀರ್ತಿಯನ್ನು ರಾಜ್ಯ ಮಟ್ಟದವರೆಗೆ ಹೆಚ್ಚಿಸಿದ್ದಾರೆ.ಈ ಊರಿನ ಹೆಚ್ಚಿನ ಸಂಖ್ಯೆಯಲ್ಲಿರುವ ಪಾಲಕರು ರೈತರಾಗಿದ್ದು,ದೇಶದ ಬೆನ್ನೆಲಬು ಆದರೆ,ಇವರ ಮಕ್ಕಳು ಉತ್ತಮ ಶಿಕ್ಷಣದ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ.ಶಿಂದೋಳಿ ಶಾಲೆಯ ಶಿಕ್ಷಕರ ಪರಿಶ್ರಮ,ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರ, ಉಪಾಧ್ಯಕ್ಷರ,ಸರ್ವ ಸದಸ್ಯರ,ಪಾಲಕರ,ಪೋಷಕರ ಮಕ್ಕಳ ಸಹಭಾಗಿತ್ವದ ವಾತಾವರಣ ಇಲ್ಲಿ ಕಾಣಬಹುದಾಗಿದೆ.ಶಿಂದೋಳಿ ಶಾಲೆಯ ಶೈಕ್ಷಣಿಕ ಕ್ಷೇತ್ರದಲ್ಲಿನ ಸರ್ವಾಂಗೀಣ ಯಶಸ್ಸು ಇಲ್ಲಿನ ಶಿಕ್ಷಕ ವೃಂದ,ಸಮಸ್ತ ಸಮುದಾಯದಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಮುಖ್ಯ ಶಿಕ್ಷಕರಾದ ಹೆ ಚ್ ಸಿ ಜಾಧವರವರು ಮಾತನಾಡಿ ನಮ್ಮ ಕೈಯಲ್ಲಿ ಶಿಕ್ಷಣ ಜ್ಞಾನವನ್ನು ಪಡೆದ ಈ ಊರಿನ ಶಿಷ್ಯಂದಿರು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದು,ಇವತ್ತು ಅವರ ಜೊತೆ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಖುಷಿಯ ವಿಚಾರ.ಅದೇ ರೀತಿಯಾಗಿ ಅವರ ಮಕ್ಕಳಾದ ನೀವು ಸಹ ಉತ್ತಮ ಶೈಕ್ಷಣಿಕ ವಿಭಾಗದಲ್ಲಿ ಮಾಡುತ್ತಿದ್ದು,ಜನ್ಮ ಕೊಟ್ಟ ತಾಯಿ ಮೊದಲ ಗುರು,ಎಲ್ಲವನ್ನು ಪೂರೈಸುವ ತಂದೆ ಎರಡನೇ ಗುರು,ವಿದ್ಯಾಜ್ಞಾನ ನೀಡುವ ಗುರು ಮೂರನೇ ಗುರು ಇವರ ಮಹತ್ವ ಅರಿತು,ಪರಿಶ್ರಮಕ್ಕೆ ಬೆಲೆ ಕೊಟ್ಟು ಉತ್ತಮ ಸಾಧನೆ ಮಾಡಿ ನಮ್ಮೆಲ್ಲರ ಪ್ರೋತ್ಸಾಹ ನಿರಂತರ ಇರಲಿದೆ,ಶಿಕ್ಷಕ ವೃಂದದವರ,ಸಮುದಾಯದವರ ಕ್ರಿಯಾಶೀಲತೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಮಾತನಾಡಿ ಜೋಯಿಡಾ ತಾಲೂಕು ಕೇಂದ್ರದಿಂದ ಸುಮಾರು ದೂರವಿರುವ ಶಿಂದೋಳಿ ಎಂಬ ಪುಟ್ಟ ಹಳ್ಳಿ.ಇಂತಹ ಹಳ್ಳಿಯ ಪರಿಸರದಲ್ಲಿಯು ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ,ಪಾಲಕರಲ್ಲಿರುವ ಶಿಕ್ಷಣಾಸಕ್ತಿ ಹಾಗೂ ಶಿಕ್ಷಕರ ನಿರಂತರ ಪ್ರಯತ್ನದ ಕಾರಣದಿಂದ ಶಿಂದೋಳಿ ಶಾಲೆಯು ನಮ್ಮ ತಾಲೂಕಿನ ಅತ್ಯುತ್ತಮ ಶಾಲೆಗಳಲ್ಲೊಂದಾಗಿದೆ.ಮಕ್ಕಳ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸಿ ಕೊಡುವ ಜವಾಬ್ದಾರಿ ಪಾಲಕರ ಮೇಲಿರುತ್ತದೆ.ಜೊತೆಗೆ ಶಾಲೆಯ ಕಾರ್ಯಚಟುವಟಿಕೆಗಳಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ.ಅಂದಾಗ ಮಾತ್ರ ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ನೀಡುವುದು ಸುಲಭವಾಗುತ್ತದೆ.ಈ ಎಲ್ಲಾ ಅಂಶಗಳು ಶಿಂದೋಳಿ ಶಾಲೆಯಲ್ಲಿರುವುದು ಸಂತೋಷದ ಸಂಗತಿ.ಮಕ್ಕಳು ಉತ್ತಮ ನಾಗರೀಕರಾಗಲು ಶಿಕ್ಷಕರ ಪಾತ್ರ ದೊಡ್ಡದು.ನಮ್ಮ ಶಾಲೆ ನಮ್ಮ ಹೆಮ್ಮೆ ಎನ್ನುವ ಪರಿಕಲ್ಪನೆ ಇದ್ದಾಗ ಅಭಿವೃದ್ಧಿ ಹೊಂದಬಹುದು ಎಂಬುದಕ್ಕೆ ಇಲ್ಲಿನ ಶಾಲೆಯು ನಿದರ್ಶನವಾಗಿದೆ.ಎಸ್ ಡಿ ಎಂ ಸಿ ಯ ಕಾಳಜಿಯಿಂದ ಉತ್ತಮ ಕಾರ್ಯ ನಡೆದಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಮಹತ್ವ ನೀಡುತ್ತಿದೆ.ಸರ್ಕಾರಿ ಶಾಲೆಯನ್ನು ಬೆಳೆಸುವ ಕೆಲಸಕ್ಕೆ ಜನಸಾಮಾನ್ಯರು ಕೈ ಜೋಡಿಸಬೇಕು.ಮಕ್ಕಳಿಗೆ ಕೇವಲ ಪುಸ್ತಕದ ವಿದ್ಯೆಯಷ್ಟೇ ಸಾಲದು,ಅದರೊಂದಿಗೆ ಸಂಸ್ಕ್ರತಿಯ ಅರಿವು ಇರಬೇಕು.ಸಂಸ್ಕಾರಯುತ ಜೀವನಶೈಲಿಯಿಂದ ಮಾತ್ರ ಸಮಾಜದ ಟೀಕೆ ಮತ್ತು ನಿಂದನೆಗಳಿಂದ ಹೊರಬರಲು ಸಾಧ್ಯ.ಶಾಲೆಗಳು ಕೇವಲ ಅಕ್ಷರ ಕಲಿಯುವ ಜಾಗವಲ್ಲ.ಅವು ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಜೀವನದ ದಾರಿಯನ್ನು ತೋರಿಸುವ ಮಾರ್ಗದರ್ಶನದ ಕೇಂದ್ರಗಳಾಗಿವೆ.ಶಿಕ್ಷಕರು ಕೂಡ ತಮ್ಮೆಲ್ಲ ಶ್ರಮವನ್ನು ಪುಟ್ಟ ಮಕ್ಕಳ ಭವಿಷ್ಯವನ್ನು ರೂಪಿಸಲು ಮುಡಿಪಾಗಿಡುತ್ತಾರೆ.ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಇಷ್ಟು ವಿಜ್ರಂಭಣೆಯಿಂದ ಕಾರ್ಯಕ್ರಮ ಸಂಘಟಿಸಿ ಯಶಸ್ವಿಯಾಗಲು ಶಾಲಾ ಶಿಕ್ಷಕರ ಪರಿಶ್ರಮ,ಗ್ರಾಮಸ್ಥರ ಜತೆಗಿನ ಉತ್ತಮ ಬಾಂಧವ್ಯ ಕಾರಣ.ಸರಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರಿರುವುದರಿಂದ ಇಂತಹ ವಿಶಿಷ್ಟ ಕಾರ್ಯಕ್ರಮದ ಜೊತೆಗೆ ಗುಣಮಟ್ಟದ ಶಿಕ್ಷಣ ದೊರೆಯಲು ಸಾಧ್ಯ. ಸರಕಾರಿ ಶಾಲೆಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ಪಾಲಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಶಾಲೆಯ ಕ್ರೀಯಾಶೀಲ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗುರುನಾಥ ಮಾಜಾಳಕರರವರು ಮಾತನಾಡಿ ನಮ್ಮ ಊರಿನ ಶಾಲೆಯು ಇಂದು ಶೈಕ್ಷಣಿಕ ವಿಭಾಗದ ಎಲ್ಲಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಕಾರಣಿಕರ್ತರಾದ ಶಿಕ್ಷಕ ವೃಂದ,ಎಸ್ ಡಿ ಎಂ ಸಿ ಸರ್ವ ಪದಾಧಿಕಾರಿಗಳ ಸಹಕಾರ,ಪಾಲಕರ,ಪೋಷಕರ,ಮಕ್ಕಳ ಸಾಧನೆಯ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದರು.ಇದೇ ರೀತಿಯ ಸಹಾಯ,ಸಹಕಾರ ನಿರಂತರ ಇರಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಿಂದೋಳಿ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಯಾಗಿ ಹಳಿಯಾಳ ತಾಲೂಕಿನ ತೇರಗಾಂವ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ ಮಳಿಕ ಸರ್ ರವರು ಮಕ್ಕಳ,ಶಿಕ್ಷಕ ವೃಂದದವರ,ಪಾಲಕರ ಅಭಿಮಾನದಿಂದ ಭಾಗವಹಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷ ಮೆರಗನ್ನು ನೀಡಿತು. ವೇದಿಕೆಯಲ್ಲಿ ಅಸು ಗ್ರಾಮ ಪಂಚಾಯತ ಸದಸ್ಯರಾದ ನಾಗೇಶ ಕಾಪೋಲಕರ, ಹನುಮಾನಲೇನ್ ಶಾಲೆಯ ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿ,ಶಾಲೆಯ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ತನುಜಾ ಮಸೂರಕರ,ಸದಸ್ಯರಾದ ವಾಸುದೇವ ಕಾಪೋಲಕರ, ಯೋಗೇಶ ಮಿರಾಶಿ,ತುಕಾರಾಮ ಠಾಕೂರ,ಜಗಲಬೇಟ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಜ್ಯೋತಿಬಾ ಕುಂಬಾರ,ಕಾನೇಕರ ಲೇನ್ ಶಾಲೆಯ ಸಹ ಶಿಕ್ಷಕಿಯಾದ ಸ್ಮಿತಾ ಜಾಧವ,ಕ್ಯಾಸಲ್ ರಾಕ್ ಶಾಲೆಯ ರವಿಚಂದ್ರ ಕುಮಟಾ ಸೌರಾಷ್ಟ್ರ ನವೋದಯ ಕೋಚಿಂಗ್ ಕ್ಲಾಸಸ್ ನ ಭೀಮಪ್ಪ ಸರ್ ಇನ್ನಿತರ ಪ್ರಮುಖರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಂದೋಳಿ ಶಾಲೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದ, ಪ್ರಸ್ತುತ ತೇರಗಾಂವ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ ಮಳಿಕ ಶಿಕ್ಷಕರು ಅತ್ಯುತ್ತಮವಾಗಿ ನಿರ್ವಹಿಸಿದರು. ಸಭಾ ಕಾರ್ಯಕ್ರಮದಲ್ಲಿನ ಗಣ್ಯರನ್ನು ಶಿಂದೋಳಿ ಶಾಲೆಯ ಸಹ ಶಿಕ್ಷಕರಾದ ಆನಂದ ಪಿ ರವರು ಧನ್ಯವಾದಗಳನ್ನು ಸಲ್ಲಿಸಿದರು.
