ಸುದ್ದಿ ಕನ್ನಡ ವಾರ್ತೆ
ದಾಂಡೇಲಿ ನಗರದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಏಕಲ್ ವಿದ್ಯಾಲಯ ದಾಂಡೇಲಿ ಸಮಿತಿಯು ಆರಂಭಗೊಂಡು ೨೫ ವರ್ಷ ಪೂರ್ಣಗೊಳಿಸಿದ ಸವಿನೆನಪಿನ ರಜತ ಮಹೋತ್ಸವ ಸಂಭ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾದ ಏಕಲ್ ಅಭಿಯಾನದ ಪೂರ್ಣಕಾಲಿಕ ಕಾರ್ಯಕರ್ತರಾದ ಶ್ರೀ ಮೋಹನರಾವ್ ಜಿ , ಚಂದ್ರಶೇಖರ ವೊನ್ನಿಮಾನ್ ಜಿ, ಗಣೇಶ ಶೆಣೈ ಜಿ, ಏಕಲ್ ಅಭಿಯಾನ ಬೆಳಗಾವಿ ಸಮಿತಿ ಅಧ್ಯಕ್ಷರಾದ ಗಿರೀಶ ಪೈ ಜಿ ಹಾಗೂ ವಿಶೇಷ ಅತಿಥಿಗಳಾಗಿ ಆಗಮಿಸಿದ ಮಧ್ಯಪ್ರದೇಶದ ನಿವೃತ್ತ ಡಿಜಿಪಿ ಡಾ. ಮಹೇಂದ್ರ ಕುಮಾರ್ ಶುಕ್ಲಾಜಿ, ಆಶಾ ಶುಕ್ಲಾಜಿ ಉಪಸ್ಥಿತರಿದ್ದು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಸಂಸ್ಥೆಯ ಇಪ್ಪತ್ತೈದು ವರ್ಷಗಳ ಸಾಧನೆಗಳನ್ನು ದೃಶ್ಯ ಮಾಧ್ಯಮದ ಮೂಲಕ ಬಿತ್ತರಿಸಲಾಯಿತು. ಹಾಗೂ ಏಕಲ್ ಅಭಿಯಾನದ ದಾಂಡೇಲಿ ಸಮಿತಿ ಸದಸ್ಯರಾದ ರೂಪೇಶ ಧುರಿ,ದೀಪಕ ಸಾಮಂತ, ಪ್ರಕಾಶ ಬೇಟಕರ ಹಾಗೂ ಏಕಲ್ ಅಭಿಯಾನದ ಕಾರ್ಯಕರ್ತರಾದ ಅದೃಶ್ಯಯ್ಯಜಿ, ವಿಭಾಕರರವರು ಮಾತನಾಡಿ ಮೂಲ ಸೌಕರ್ಯದಿಂದ ವಂಚಿತವಾದ ಜೊಯಿಡಾದಂತಹ ಭಾಗದ ಹಳ್ಳಿ ಹಳ್ಳಿಗಳಲ್ಲಿ ಶಾಲೆಗಳನ್ನು ಸ್ಥಾಪಿಸಿದ ಬಗೆ, ಅದನ್ನು ನಿರ್ವಹಿಸಿದ ರೀತಿಯನ್ನು ಮನೋಜ್ಞವಾಗಿ ವಿವರಿಸಿದರು. ಆ ಸಮಯದಲ್ಲಿ ಏಕಲ್ ವಿದ್ಯಾಲಯ ನಡೆದು ಬಂದ ದಾರಿ, ಕಾರ್ಯಕರ್ತರು,ಆಚಾರ್ಯರು ಎದುರಿಸಿದ ಕಷ್ಟನಷ್ಟಗಳನ್ನು ವಿವರಿಸಿ ದೇಶ ಸೇವೆಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸುವ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡರು.
ಆಹ್ವಾನಿತ ಅತಿಥಿಗಳು ಮಾತನಾಡಿ ಏಕಲ್ ಅಭಿಯಾನದ ಮೂಲ ಧ್ಯೇಯೋದ್ದೇಶಗಳು ಹಾಗೂ ಗ್ರಾಮೀಣ ವಿಕಾಸ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ,ಸಂಸ್ಕಾರ, ದೇಶಪ್ರೇಮವನ್ನು ಕಲಿಸುವ ಕಾರ್ಯ ನಮ್ಮ ಏಕಲ್ ಅಭಿಯಾನದಿಂದಾಗಿ ಸಾಕಾರಗೊಂಡಿದೆ ಎಂದರು. ಜೊತೆಗೆ ಕರ್ನಾಟಕದಲ್ಲಿಯೇ ಮೊದಲು ಆರಂಭವಾದ ದಾಂಡೇಲಿ ಏಕಲ್ ವಿದ್ಯಾಲಯ ಸಮಿತಿಯ
ಕಾರ್ಯವನ್ನು ಶ್ಲಾಘಿಸಿದರು.
ನಂತರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಈ ಇಪ್ಪತ್ತೈದು ವರ್ಷಗಳ ಕಾರ್ಯಾವಧಿಯಲ್ಲಿ ಏಕಲ್ ಅಭಿಯಾನ ಯಶಸ್ವಿಗೊಳಿಸುವಲ್ಲಿ ತನುಮನ ಧನದಿಂದ ಸಹಕರಿಸಿದ ಎಲ್ಲ ಮಹನೀಯರಿಗೂ ಹಾಗೂ ಏಕಲ್ ಅಭಿಯಾನದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ ಎಲ್ಲ ಕಾರ್ಯಕರ್ತರಿಗೂ, ಏಕಲ್ ವಿದ್ಯಾಲಯದ ಶಿಕ್ಷಕರಾಗಿ ಕೆಲಸ ಮಾಡಿದ ಎಲ್ಲಾ ಆಚಾರ್ಯರಿಗೂ ಸನ್ಮಾನಿಸಲಾಯಿತು. ಮೋಹನರಾವ್ ಜಿ ದಂಪತಿಗಳಿಗೆ 50 ವರ್ಷಗಳ ಕಾಲ ಮಾಡಿದ ಏಕಲ್ ಅಭಿಯಾನದ ಕಾರ್ಯ ಹಾಗೂ ಸಮಾಜ ಸೇವೆ ಪರಿಗಣಿಸಿ “ನಾಗರಿಕ ಸನ್ಮಾನ” ಸನ್ಮಾನ ಪತ್ರ ನೀಡಿ ಸತ್ಕರಿಸಲಾಯಿತು.
ಈ ಸಮಯದಲ್ಲಿ ಏಕಲ್ ಅಭಿಯಾನ ದಾಂಡೇಲಿಯ ಅಧ್ಯಕ್ಷರಾದ ಮುರಲಿಧರ ಗೋಸಿ ಸದಸ್ಯರಾದ ರೂಪೇಶ್ ಧುರಿ,ದೀಪಕ ಸಾಮಂತ,ಅಶೋಕ ಪಾಟೀಲ, ಪ್ರಕಾಶ ಬೇಟಕರ, ಗೋವಿಂದ ರಾಜ,ರವಿ ಪಾವಸ್ಕರ, ಪ್ರಶಾಂತ ಧುಮೆ ಹಾಗೂ ಮಹಿಳಾ ಸಮಿತಿ ಸದಸ್ಯರೆಲ್ಲರೂ ಉಪಸ್ಥಿತರಿದ್ದು ಸಹಕರಿಸಿದರು.
ಅಕ್ಷತಾ ಬೇಗುರ ,ದೇಮಕ್ಕಾ ಜಾಲಗಾರ ಪ್ರಾರ್ಥಿಸಿದರು. ವಿನುತಾ ಗೋಸಿಯವರು ಸ್ವಾಗತಿಸಿ ಸಂಗೀತಾ ನಾಯ್ಕರವರು ವಂದಿಸಿದರು. ದೀಪಾಲಿ ಸಾಮಂತರವರು ಕಾರ್ಯಕ್ರಮ ನಿರೂಪಿಸಿದರು.
