ಸುದ್ದಿ ಕನ್ನಡ ವಾರ್ತೆ
ನೀಟ್ ರೀಚಬಲ್ ಕ್ರಿಯೇಟಿವ್ ಸೊಲ್ಯೂಶನ್ಸ್ ಸಂಸ್ಥೆಯ ವತಿಯಿಂದ ನಾಳೆ ಅಂದರೆ 2026ರ ಫೆಬ್ರವರಿ 1ರ ಭಾನುವಾರದಂದು ಬೆಂಗಳೂರಿನಲ್ಲಿ ಟೆಕ್ ವೈದ್ಯ ವೆಬ್ ಪೋರ್ಟಲ್ ಮತ್ತು ‘ಎಐ ಭಗವದ್ಗೀತೆ’ ಪುಸ್ತಕದ ಲೋಕಾರ್ಪಣೆ ಸಮಾರಂಭವನ್ನು ಆಯೋಜಿಸಲಾಗಿದೆ. ಗವಿಪುರಂನಲ್ಲಿರುವ ಉದಯಭಾನು ಕಲಾಸಂಘದಲ್ಲಿ ಬೆಳಿಗ್ಗೆ 9.30 ರಿಂದ ಈ ಕಾರ್ಯಕ್ರಮ ನಡೆಯಲಿದೆ. ಕನ್ನಡದಲ್ಲಿ ತಂತ್ರಜ್ಞಾನ ಸಾಹಿತ್ಯ ಮತ್ತು ಡಿಜಿಟಲ್ ಮಾಧ್ಯಮಕ್ಕೆ ಸಂಬಂಧಿಸಿದಂತೆ ಇದೊಂದು ಮಹತ್ವದ ಕಾರ್ಯಕ್ರಮವಾಗಿದೆ.
ಕಾರ್ಯಕ್ರಮದಲ್ಲಿ ನಾಗರಾಜ ವೈದ್ಯ ಅವರು ರಚಿಸಿರುವ ‘AI ಭಗವದ್ಗೀತೆ’ ಎಂಬ ಕೃತಿಯು ಬಿಡುಗಡೆಯಾಗಲಿದೆ. ‘ಡಿಜಿಟಲ್ ಭವಿಷ್ಯದ ವಿಶ್ವರೂಪ ದರ್ಶನ’ ಎಂಬ ಉಪಶೀರ್ಷಿಕೆಯನ್ನು ಹೊಂದಿರುವ ಈ ಪುಸ್ತಕವು, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸಮಗ್ರ ನೋಟವನ್ನು ಒದಗಿಸುತ್ತದೆ. ಎಐ ಪ್ರಪಂಚದ ಆಳ ಮತ್ತು ಅಗಲವನ್ನು, ಅದು ಭವಿಷ್ಯದಲ್ಲಿ ಸೃಷ್ಟಿಸಲಿರುವ ವಿಸ್ಮಯಗಳನ್ನು ಮತ್ತು ಸಾಧ್ಯತೆಗಳನ್ನು ಕನ್ನಡಿಗರಿಗೆ ಸರಳವಾಗಿ ಅರ್ಥೈಸುವ ನಿಟ್ಟಿನಲ್ಲಿ ಈ ಕೃತಿಯನ್ನು ರಚಿಸಲಾಗಿದೆ. ಇದರೊಂದಿಗೆ ಟೆಕ್ ವೈದ್ಯ ಪೋರ್ಟಲ್ ನ ಅಪ್ಡೇಟ್ 2.0 ಆವೃತ್ತಿಯೂ ಲೋಕಾರ್ಪಣೆಗೊಳ್ಳಲಿದ್ದು ‘ಕಣಕಣವೂ ತಂತ್ರಜ್ಞಾನ’ ಎಂಬ ಧ್ಯೇಯದೊಂದಿಗೆ ಇದು ಕಾರ್ಯನಿರ್ವಹಿಸಲಿದೆ.
ಈ ಸಮಾರಂಭಕ್ಕೆ ಸಾಹಿತ್ಯ ಮತ್ತು ಮಾಧ್ಯಮ ಕ್ಷೇತ್ರದ ಗಣ್ಯರನ್ನು ಆಹ್ವಾನಿಸಲಾಗಿದೆ. ಝೀ ಕನ್ನಡ ವಾಹಿನಿಯ ಪ್ರೋಗ್ರಾಮಿಂಗ್ ಹೆಡ್ ಆಗಿರುವ ಸುಧೀಂದ್ರ ಭಾರದ್ವಾಜ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಖ್ಯಾತ ಲೇಖಕರು ಮತ್ತು ವಾಗ್ಮಿಗಳಾದ ರೋಹಿತ್ ಚಕ್ರತೀರ್ಥ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದು ಪುಸ್ತಕ ಮತ್ತು ಹೊಸ ತಂತ್ರಜ್ಞಾನದ ಕುರಿತು ಮಾತನಾಡಲಿದ್ದಾರೆ. ಪ್ರವಾಸಿ ಪ್ರಪಂಚ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ನವೀನ್ ಸಾಗರ್, ಖ್ಯಾತ ನಟ ಹಾಗೂ ಧ್ವನಿ ಕಲಾವಿದರಾದ ಪ್ರದೀಪ್ ಬಡೆಕ್ಕಿಲ ಅವರು ಕೂಡ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಲೇಖಕ ಹಾಗೂ ಟೆಕ್ವೈದ್ಯದ ಸಂಪಾದಕ ನಾಗರಾಜ ವೈದ್ಯ ಮತ್ತು ಚೈತ್ರಿಕಾ ವೈದ್ಯ ಅವರ ನೇತೃತ್ವದಲ್ಲಿ ನೀಟ್ರೀಚೇಬಲ್ ಕ್ರಿಯೇಟಿವ್ ಸೊಲ್ಯೂಷನ್ಸ್ ತಂಡವು ಈ ಕಾರ್ಯಕ್ರಮವನ್ನು ಆಯೋಜಿಸಿದೆ. ತಂತ್ರಜ್ಞಾನ ಆಸಕ್ತರು ಮತ್ತು ಸಾರ್ವಜನಿಕರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಕ್ತ ಆಹ್ವಾನ ನೀಡಲಾಗಿದೆ. ಕನ್ನಡದಲ್ಲಿ ತಂತ್ರಜ್ಞಾನವನ್ನು ಬೆಳೆಸುವ ನಿಟ್ಟಿನಲ್ಲಿ ಇದೊಂದು ಹೊಸ ಹೆಜ್ಜೆಯಾಗಿದೆ.
