ಸುದ್ದಿ ಕನ್ನಡ ವಾರ್ತೆ
ಹೊನ್ನಾವರ: ಶಾಲೆ, ಬಸ್ ನಿಲ್ದಾಣ, ಆಸ್ಪತ್ರೆಗಳಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಫಿಲ್ಟರ್ ಅಳವಡಿಸಿ ಎಲ್ಲರೂ ಅರೋಗ್ಯ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕೆಂಬುದೇ ನಮ್ಮ ಆಶಯ. ನಮ್ಮ ದೇವಸ್ಥಾನ, ನಮ್ಮ ಶಾಲೆಗಳನ್ನು, ಸರಕಾರಿ ಆಸ್ಪತ್ರೆಗಳನ್ನು ನಾವೇ ಕಾಪಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ನನ್ನ ಕೈಲಾದಷ್ಟು ಸಹಾಯವನ್ನು ನಾನು ಮಾಡುತ್ತಿದ್ದೇನೆ. ನಾವು ವಾಟರ್ ಫಿಲ್ಟರ್ ಅಳವಡಿಸಿದ ಕಡೆಗಳಲ್ಲಿ ಅದರ ಸದುಪಯೋಗ ಆಗುತ್ತಿದೆ ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ಅವರು ಹೊನ್ನಾವರ ತಾಲೂಕಿನ ಇಳಿಕಾರ್ ಸಮೀಪದ ಕರ್ಕಿ ಸರಕಾರಿ ಪ್ರಾಥಮಿಕ ಶಾಲೆಗೆ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ದೇಣಿಗೆ ನೀಡಿ ಮಾತನಾಡಿದರು.
ಮಕ್ಕಳು ದೇವರು ಸಮಾನ. ಕಲ್ಮಶ ಇಲ್ಲದ ಈ ಮಕ್ಕಳ ಜೊತೆಗೆ ಸಮಯ ಕಳೆಯುವುದೇ ಭಾಗ್ಯ. ಆದಾಯದ ಒಂದು ಭಾಗದ ಹಣವನ್ನು ಸೇವೆಗೆಂದು ಮೀಸಲಿಡುತ್ತೇನೆ. ಆಧುನಿಕ ಸೌಕರ್ಯಗಳಿಲ್ಲ ಎಂಬ ಕಾರಣದಿಂದ ಜನ ದೂರದ ನಗರಗಳಿಗೆ ಹೋಗುತ್ತಿದ್ದಾರೆ. ಶಾಲೆಯ ಗುಣಮಟ್ಟ ಅಲ್ಲಿರುವ ಆಧುನಿಕ ಸೌಕರ್ಯಗಳಿಂದಲ್ಲ, ಅಲ್ಲಿ ದೊರೆಯುವ ಶಿಕ್ಷಣದಿಂದ ನಿರ್ಧರಿತವಾಗುತ್ತದೆ. ಶಾಲೆಗೆ ಬರುವ ಮಕ್ಕಳನ್ನು ನಮ್ಮ ಮಕ್ಕಳೆಂದು ಪ್ರೀತಿಸುವ ಶಿಕ್ಷಕರಿಂದ ಶಿಕ್ಷಣ ಹೆಚ್ಚು ಪರಿಣಾಮಕಾರಿಯಾಗುತ್ತದೆ.
ಮನುಷ್ಯನ ಜೀವನ ಶಾಶ್ವತವಲ್ಲ. ಇರುವಷ್ಟು ದಿನ ನಮ್ಮ ಕೈಲಾದ ಸೇವೆಯನ್ನು ಮಾಡಬೇಕು. ದುಡ್ಡಿರುವವನು ಶ್ರೀಮಂತನಲ್ಲ, ತನ್ನಲ್ಲಿರುವುದರಲ್ಲಿಯೇ ಮತ್ತೊಬ್ಬರಿಗೆ ಕೊಡುವವನು ನಿಜವಾದ ಶ್ರೀಮಂತ. ಉಸಿರು ಹೋದಮೇಲೂ ಹೆಸರು ಉಳಿಯಬೇಕೆಂದರೆ ಅದು ದಾನ, ಸೇವೆಯಿಂದಲೇ ಸಾಧ್ಯ. ಸಿದ್ದಗಂಗಾ ಮಠದ ಪೂಜನೀಯ ಸ್ವಾಮೀಜಿಗಳು ಹಾಗೂ ಪುನೀತ್ ರಾಜಕುಮಾರ್ ಅವರ ಸಮಾಜ ಸೇವೆ ನನಗೆ ಎಂದಿಗೂ ಆದರ್ಶ.
ನನ್ನ ಅಲ್ಪ ಸೇವೆಯನ್ನು ಪರಿಗಣಿಸಿ ತಾವೆಲ್ಲರೂ ನನ್ನನ್ನು ಪ್ರೀತಿಯಿಂದ ಸನ್ಮಾನಿಸಿದ್ದೀರಿ. ನಿಮ್ಮೆಲ್ಲರ ಈ ಪ್ರೀತಿ ಮನಸ್ಸಿಗೆ ತೃಪ್ತಿ ನೀಡಿದೆ. ಈ ಶಾಲೆಯಲ್ಲಿ ಓದುವ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪುಟ್ಟ ಮಕ್ಕಳಿಗೆ ಪಟ್ಟಿ, ಪೆನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್. ಎಸ್ ಹೆಗಡೆ ಕರ್ಕಿ, ಎಸ್. ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸದಸ್ಯರು, ಶಾಲೆಯ ಮುಖ್ಯಾಧ್ಯಾಪಕರು, ಊರಿನ ನಾಗರಿಕರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
