ಸುದ್ದಿ ಕನ್ನಡ ವಾರ್ತೆ

ಹಳಿಯಾಳ :ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನವು ಬಾರಾಮತಿ ಸಮೀಪ ದುರಂತಕ್ಕೀಡಾಗಿ ಪತನಗೊಂಡು,ಅಜಿತ್ ಪವಾರ್ ಅವರೂ ಸೇರಿದಂತೆ ಆರು ಮಂದಿ ಪ್ರಯಾಣಿಕರು ದುರ್ಮರಣಕ್ಕೀಡಾಗಿದ್ದಾರೆ ಎಂಬ ಧಾರುಣ ಸುದ್ದಿ ನನ್ನ ಮನಸ್ಸನ್ನು ತೀವ್ರವಾಗಿ ಕಲಕಿದೆ ಎಂದು ಶಾಸಕ ಆರ್ ವಿ ದೇಶಪಾಂಡೆ ಕಂಬನಿ ಮಿಡಿದಿದ್ದಾರೆ.

ಅಜಿತ್ ಪವಾರ್ ಅವರು ನನ್ನ ಅತ್ಯಂತ ಆಪ್ತ ಸ್ನೇಹಿತರಾಗಿದ್ದು, ಸಾರ್ವಜನಿಕ ಜೀವನದಲ್ಲಿ ಅಪಾರ ಅನುಭವ,ದೃಢ ನಿರ್ಧಾರಶಕ್ತಿ ಹಾಗೂ ಜನಪರ ಕಾಳಜಿಯುಳ್ಳ ನಾಯಕನಾಗಿ ಗುರುತಿಸಿಕೊಂಡಿದ್ದರು. ಅವರ ಮುಂದಿದ್ದ ರಾಜಕೀಯ ಹಾಗೂ ಸಾಮಾಜಿಕ ಭವಿಷ್ಯ ಅತ್ಯಂತ ಉಜ್ವಲವಾಗಿತ್ತು. ಆದರೆ ವಿಧಿಯ ನಿರ್ಣಯವು ಎಲ್ಲರ ನಿರೀಕ್ಷೆಗಳನ್ನು ಚೂರಾಗಿಸಿದೆ.

ಅವರ ಆತ್ಮೀಯತೆ, ಸೌಜನ್ಯ,ಸರಳತೆ ಹಾಗೂ ಜನಸಾಮಾನ್ಯರೊಂದಿಗೆ ಹೊಂದಿದ್ದ ನಿಕಟ ಸಂಬಂಧ ಅವರನ್ನು ಪರಿಚಯಿಸಿಕೊಂಡ ಪ್ರತಿಯೊಬ್ಬರ ಮನಸ್ಸಿನಲ್ಲಿ ಸದಾಕಾಲ ಅಚ್ಚಳಿಯದೇ ಉಳಿಯಲಿದೆ.ರಾಜ್ಯದ ಸಾರ್ವಜನಿಕ ಜೀವನಕ್ಕೆ ಅವರ ಅಗಲಿಕೆಯು ತುಂಬಲಾರದ ನಷ್ಟವಾಗಿದೆ.

ಈ ದುರ್ಘಟನೆಯಲ್ಲಿ ಅಗಲಿದ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.ಪವಾರ್ ಕುಟುಂಬದವರಿಗೆ ಹಾಗೂ ಇತರ ಎಲ್ಲಾ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ಸಲ್ಲಿಸುತ್ತೇನೆ.ಈ ದುಃಖದ ಸಂದರ್ಭದಲ್ಲಿ ಬಾಧಿತರಾದ ಎಲ್ಲರಿಗೂ ನೋವನ್ನು ಸಹಿಸುವ ಶಕ್ತಿ ಮತ್ತು ಧೈರ್ಯವನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಕಂಬನಿ ಮಿಡಿದಿದ್ದಾರೆ.