ಸುದ್ದಿ ಕನ್ನಡ ವಾರ್ತೆ

ಶಿರಸಿ: ಕಳೆದ ಒಂದು ವರ್ಷದಿಂದ ನನ್ನ ಮೇಲೆ ನನ್ನ ರಾಜಕೀಯ ವಿರೋಧಿಗಳು ನಿರಂತರವಾಗಿ ಸಂಚನ್ನು ನಡೆಸುತ್ತಿದ್ದು, ಹಿಂದೆ ಹಲವಾರು ಸಂಚನ್ನು ಮಾಡಿದರೂ ಕೂಡ ಮಾರಿಕಾಂಬೆಯ ಅನುಗ್ರಹದಿಂದ ಪಾರಾಗಿದ್ದೇನೆ. ನಾನು ಯಾವುದೇ ಅನೈತಿಕ ವ್ಯವಹಾರವಾಗಲಿ, ಅಕ್ರಮ ಚಟುವಟಿಕೆಯಾಗಲಿ ನಡೆಸುತ್ತಿಲ್ಲ, ನ್ಯಾಯ ರೀತಿಯಲ್ಲಿ ನನ್ನ ಜೀವನ ಹಾಗು ವ್ಯವಹಾರವನ್ನು ನಡೆಸುತ್ತಿದ್ದು, ನನ್ನ ವಿರುದ್ಧ ಶಡ್ಯಂತ್ರ ನಡೆಸುವವರನ್ನು ಗುರುತಿಸಿ ಬಂಧಿಸಬೇಕು ಹಾಗು ಪೋಲೀಸ್ ಇಲಾಖೆ ಸೂಕ್ತ ಭದ್ರತೆಯನ್ನು ನನಗೆ ನೀಡಬೇಕೆಂದು ಅನಂತಮೂರ್ತಿ ಹೆಗಡೆ ಪೋಲೀಸ್ ಉಪ ವರಿಷ್ಠಾಧಿಕಾರಿ ಅವರಿಗೆ ದೂರನ್ನು ದಾಖಲಿಸಿದ್ದಾರೆ.

ಅವರು ಮಂಗಳವಾರ ಶಿರಸಿಯಲ್ಲಿ ಪೋಲೀಸ್ ಉಪ ವರಿಷ್ಠಾಧಿಕಾರಿ ಗೀತಾ ಪಾಟೀಲ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದರು. ದೂರಿನ ಸಾರಾಂಶದಂತೆ, ನಾನು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪದಾಧಿಕಾರಿಯಾಗಿದ್ದು, ರಾಜಕೀಯವಾಗಿ ಹಲವಾರು ಬಾರಿ ಜನರ ಪರವಾಗಿ ಹೇಳಿಕೆ ಕೊಟ್ಟಿರುತ್ತೇನೆ. ಅದೇ ಕಾರಣಕ್ಕೆ ಈ ಹಿಂದೆ ಸುಳ್ಳು ಆಪಾದನೆ ಮಾಡಿ ಕೇಸ್ ದಾಖಲು ಮಾಡಿಸಿದ್ದು ತಮ್ಮೆಲ್ಲರ ಗಮನಕ್ಕಿದೆ, ಆ ಪ್ರಕರಣಕ್ಕೆ ಸಂಬಂಧಿಸಿ ಮಾನ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ಕೂಡ ನೀಡಿದೆ. ಕಳೆದ ಒಂದು ವರ್ಷದ ಹಿಂದೆ ರಾತ್ರಿ ವೇಳೆ ಕ್ರಿಕೆಟ್, ಕಬಡ್ಡಿ ಪಂದ್ಯಾವಳಿ ಹೋಗುವಾಗ ದೈಹಿಕ ಹಲ್ಲೆ ನಡೆಸಲು ಸಂಚು ರೂಪಿಸಲಾಗಿತ್ತು, ಅದರ ಮಾಹಿತಿಯೂ ಸಿಕ್ಕಿದ್ದರಿಂದ ನಾನು ಪಾರಾಗಿದ್ದೇನೆ. ನನ್ನ ಮೇಲೆ ಸುಳ್ಳು ಅಟ್ರಾಸಿಟಿ ಕೇಸ್, ಮಹಿಳೆಯರಿಂದ ದೂರು ಕೊಡಿಸುವುದು ಹೀಗೆ ಎಲ್ಲ ರೀತಿಯ ಪ್ರಯತ್ನವನ್ನು ಮಾಡಿದ್ದು ನನಗೆ ಗೊತ್ತಾಗಿದೆ. ಆದರೆ ನನಗೆ ಪೊಲೀಸ್ ವ್ಯವಸ್ಥೆ ಮತ್ತು ನ್ಯಾಯಾಲಯದ ಮೇಲೆ ನಂಬಿಕೆ ಇದೆ. ಜೊತೆಗೆ ತಾಯಿ ಮಾರಿಕಾಂಬೆಯ ಅನುಗ್ರಹದಿಂದ ಪಾರಾಗುತ್ತಿದ್ದೇನೆ. ನನಗೆ ಇತ್ತೀಚಿಗೆ ಮಾಹಿತಿ ಬಂದಿರುವಂತೆ ರಾಜಕೀಯ ಕಾರಣದಿಂದ ನನ್ನ ಮೇಲೆ ಸುಳ್ಳು ಕೇಸ್ ಹಾಕಿ, ಗಾಂಜಾ ಇನ್ನಿತರ ಮಾದಕ ದ್ರವ್ಯದ ಪ್ರಕರಣದಲ್ಲಿ ಸಿಕ್ಕಿಸಿ, ಕನಿಷ್ಟಪಕ್ಷ ಒಂದು ದಿನಕ್ಕಾದರೂ ಜೈಲಿಗೆ ಕಳುಹಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಿ ರಾಜಕೀಯವಾಗಿ ನನ್ನ ತೇಜೋವಧೆ ಮಾಡುವುದು ಮುಖ್ಯ ಸಂಚಾಗಿದೆ ಎಂಬ ವಿಷಯ ನನ್ನ ಗಮನಕ್ಕೆ ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಇದರ ಹೊರತಾಗಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು, ಸಾಮಾಜಿಕವಾಗಿ ಅಪಪ್ರಚಾರ ಮಾಡುವುದರ ಜೊತೆಗೆ ಯಾವುದಾದರೂ ಕೇಸ್ ಹಾಕಿಸಿ ನನ್ನನ್ನು ಜೈಲಿಗೆ ಕಳಿಸಲೇಬೇಕು ಎನ್ನುವುದೂ ಸಹ ಅವರ ಉದ್ದೇಶವಾಗಿದೆ ಮತ್ತು ನನ್ನ ಚಾರಿತ್ರ್ಯ ಹರಣ ಮಾಡುವುದು ಅವರ ದುರುದ್ಧೇಶ ಎನ್ನುವುದು ನನಗೆ ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ. ಆದ್ಧರಿಂದ ನನ್ನ ಮೇಲೆ ಯಾವುದೇ ಸುಳ್ಳು ಕೇಸ್ ಬಂದರೂ ನನ್ನನ್ನ ತಾವು ವಿಚಾರಣೆ ಮಾಡದೆ ತಾವು ಯಾವುದೇ ನಿರ್ಧಾರ ಕೈಗೊಳ್ಳ ಬಾರದು ಮತ್ತು ನನಗೆ ಸೂಕ್ತ ಭದ್ರತೆ ನೀಡಬೇಕೆಂದು ತಮ್ಮಲ್ಲಿ ಕಳಕಳಿಯ ವಿನಂತಿಸುತ್ತೇನೆ ಎಂದು ಅವರು ಪೋಲೀಸ್ ಇಲಾಖೆಗೆ ನೀಡಿದ ದೂರಲ್ಲಿ ಉಲ್ಲೇಖಿಸಿದ್ದಾರೆ.

ಇದೇ ವೇಳೆ ತಮ್ಮ ರಾಜಕೀಯ ವಿರೋಧಿಗಳ ಕುರಿತಾಗಿ ಅಭಿಪ್ರಾಯ ಹಂಚಿಕೊಂಡ‌ ಅವರು, ನಾನು ಕಳೆದ ಕೆಲ ವರ್ಷಗಳಿಂದ ಸಾಮಾಜಿಕ ಸಮಸ್ಯೆಗಳಿಗೆ ನನ್ನ ಕೈಲಾದ ಮಟ್ಟಿಗೆ ಸ್ಪಂದಿಸುತ್ತಿದ್ದೇನೆ. ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಬಡವರ ಪರವಾಗಿ ಆಸ್ಪತ್ರೆ ಕೊಡಿ ಅಂದಿದ್ದು ತಪ್ಪಾ? ಅಥವಾ ಜಾತ್ರೆಗೆ ಬರುವ ಭಕ್ತರಿಗೆ ಮೂಲ ಸೌಕರ್ಯ ಮಾಡಿಕೊಡಿ ಎಂದಿದ್ದು ತಪ್ಪಾ? ರೂ.142 ಕೋಟಿಯ ಆಸ್ಪತ್ರೆಗೆ ವೈದ್ಯರನ್ನು ನೇಮಿಸಿ, 30 ಕೋಟಿ ರೂಪಾಯಿಯ ಯಂತ್ರೋಪಕರಣ ಕೊಡಿ ಎಂದು ಕೇಳಿದ್ದು ತಪ್ಪಾ ? ಯಾರೂ ಕೂಡ ವಿರೋಧ ಪಕ್ಷವಾಗಿ ಮಾತನಾಡಲೇಬಾರದಾ ? ಸಾಮಾಜಿಕ ಕಾರ್ಯಕ್ಕಾಗಿ ನ್ಯೂನ್ಯತೆಗಳನ್ನು ತೋರಿಸುವುದು, ಒಬ್ಬ ಪತ್ರಕರ್ತನಾಗಿ ಸತ್ಯವನ್ನು ಬಯಲಿಗೆಳೆಯುವುದು ತಪ್ಪಾ? ಹಾಗಾದರೆ ಜನರ ಪರವಾಗಿ ಯಾರು ಧ್ವನಿ ಎತ್ತಬೇಕು? ಹೀಗೆ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿದರೆ ನಮ್ಮ ಕಥೆ ಏನು? ಎಂದು ಅವರು ತಮ್ಮ ರಾಜಕೀಯ ವಿರೋಧಿಗಳನ್ನು ಪ್ರಶ್ನಿಸಿದ್ದಾರೆ. ಜೊತೆಗೆ ತಾಯಿ ಮಾರಿಕಾಂಬೆಯ ಆಶೀರ್ವಾದ, ಕ್ಷೇತ್ರದ ಜನತೆಯ ಪ್ರೀತಿ ಇರುವವರೆಗೂ ಇಂತಹ ನೂರು ಸಂಚುಗಳನ್ನು ಕೂಡ ಎದುರಿಸುತ್ತೇನೆ ಎಂದೂ ಸಹ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.