ಸುದ್ದಿ ಕನ್ನಡ ವಾರ್ತೆ

ಭಟ್ಕಳ: 2018-19 ಸಾಲಿನಿಂದ‌ 22-23ಸಾಲಿನ ವರೆಗೆ ಬಿಜೆಪಿ ಸರಕಾರದ ಅವಧಿಯಲ್ಲಿ ಶಿರಸಿ ವಿಭಾಗಕ್ಕೆ 87 ಬಸ್ಸುಗಳು ಹೊಸದಾಗಿ ಖರೀದಿ ಆಗಿದ್ದು, ಅದರಲ್ಲಿ ಶಿರಸಿ ಘಟಕಕ್ಕೆ 28 ಹೊಸ ವಾಹನಗಳನ್ನು ಖರೀದಿ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಸ್ವತಃ ಸಚಿವ ಮಂಕಾಳ ವೈದ್ಯರ ಕ್ಷೇತ್ರವಾದ ಭಟ್ಕಳದಲ್ಲಿ ದಾಖಲೆಗಳನ್ನು ಬಿಡುಗಡೆಗೊಳಿಸಿ, ಶಿರಸಿಯ ಮಾರಿಕಾಂಬಾ ಜಾತ್ರಾ ಸಭೆಯಲ್ಲಿ ಸಚಿವರು ಹೇಳಿರುವ ಸುಳ್ಳನ್ನು ಬಟಾಬಯಲುಗೊಳಿಸುವ ಮೂಲಕ ಮಂಕಾಳ ವೈದ್ಯರ ಸವಾಲಿಗೆ ದಾಖಲೆ ನೀಡಿ ತಿರುಗೇಟು ನೀಡಿದ್ದಾರೆ.

ಅವರು ಶನಿವಾರ ಭಟ್ಕಳದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿ, ಕಳೆದ ಕೆಲ ದಿನದ ಹಿಂದೆ ಸಚಿವ ಮಂಕಾಳ ವೈದ್ಯ ಅವರು ಶಿರಸಿಯಲ್ಲಿ ನಡೆದ ಜಾತ್ರಾ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡುವಾಗ ಕಳೆದ 7 ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಒಂದೇ ಒಂದು ಬಸ್ ಹೊಸದಾಗಿ ಬಂದಿಲ್ಲ, ಈಗ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಮೇಲೆ ಹೊಸದಾಗಿ ಬಸ್ ಜಿಲ್ಲೆಗೆ ಖರೀದಿಸಲಾಗಿದೆ ಎಂಬುದಾಗಿ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಕಳೆದ ಬಿಜೆಪಿ ಸರಕಾರದಲ್ಲಿ ಜಿಲ್ಲೆಗೆ ಹೊಸದಾಗಿ ಬಸ್ ಬಂದಿದೆ ಎಂಬುದಾಗಿ ಹೇಳಿದ್ದಕ್ಕೆ, ನಿಮ್ಮ ಬಳಿ ಬಸ್ ಬಂದಿರುವುದಕ್ಕೆ ದಾಖಲೆಗಳಿದ್ದರೆ ಬಿಡುಗಡೆ ಮಾಡಿ, ಮಂಕಾಳ ವೈದ್ಯ ದಾಖಲೆಗಳಿಲ್ಲದೇ ಯಾವತ್ತೂ ಮಾತನಾಡುವುದಿಲ್ಲ ಮತ್ತು ಸುಳ್ಳು ಹೇಳುವುದಿಲ್ಲ ಎಂಬುದಾಗಿ ಸಮಸ್ತ ಅಧಿಕಾರಿಗಳ ಎದುರು, ಶಾಸಕ ಭೀಮಣ್ಣ, ಜಿಲ್ಲಾಧಿಕಾರಿಗಳು ಇರುವಂತೆಯೇ ಹೇಳಿದ್ದರು. ಇದೀಗ ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಹೊಸದಾಗಿ ಬಸ್ ಖರೀದಿ ಮಾಡಿದ್ದರ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ವಾಯವ್ಯ ರಸ್ತೆ ಸಾರಿಗೆ ಅಧಿಕಾರಿಗಳು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ತಿಳಿಸಿದ್ದಾರೆ.

ಮಂಕಿ‌ ಚುನಾವಣೆ ಸೋಲಿಗೆ ಸಚಿವರ ಹತಾಶೆ ಮಾತು:

ಇತ್ತಿಚಿಗೆ ಸಚಿವರ ಕ್ಷೇತ್ರವಾದ ಮಂಕಿ ಚುನಾವಣೆಯಲ್ಲಾದ ಮುಖಭಂಗಕ್ಕೆ ಮಂಕಾಳ ವೈದ್ಯರಿಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಚುನಾವಣೆ ಸೋಲಿನ ಬಳಿಕ ಸಚಿವರು ಹತಾಶರಾಗಿದ್ದಾರೆ. ಸದಾ ಬಿಜೆಪಿಯವರನ್ನು ಮೇಲೆ ಬಯ್ಯುವುದನ್ನೇ ರೂಢಿಮಾಡಿಕೊಂಡಿರುವ ವೈದ್ಯರು, ಇದೀಗ ತಾವಾಡಿರುವ ಸುಳ್ಳಿನ ಮಾತಿಗೆ ತಾಯಿ ಮಾರಿಕಾಂಬೆಯ ಕ್ಷಮೆ ಕೇಳುತ್ತೀರಾ ಎಂದು ಅವರು ಪ್ರಶ್ನಿಸಿದ್ದಾರೆ. ಸುಳ್ಳು ಹೇಳುವುದು ಸಚಿವರಿಗೆ ಹೊಸದೇನಲ್ಲ, ಅವರಿಗೆ ಸುಳ್ಳು ಹೇಳುವುದು ರೂಢಿಗತವಾಗಿದೆ. ತಾವು ಜಾತ್ರಾ ಸಭೆಯಲ್ಲಿ ರಾಜಕೀಯ ಮಾತನಾಡಿ, ನನಗೆ ಚ್ಯಾಲೆಂಜ್ ಮಾಡಿದ್ದರೂ, ನಿಮಗೆ ಪ್ರತಿಯಾಗಿ ಮಾತನಾಡಲು ಅದು ಸೂಕ್ತ ವೇದಿಕೆಯಲ್ಲವೆಂದು, ಆ ಕ್ಷಣದಲ್ಲಿಯೇ ನನ್ನ ಬಳಿ ದಾಖಲೆ ಇದ್ದರೂ ಸಹ ಸುಮ್ಮನಿದ್ದೆ. ಚುನಾವಣಾ ಸೋಲಿನ ಹತಾಶೆಯಿಂದ ಎಲ್ಲ ವೇದಿಕೆಯಲ್ಲಿಯೂ ಬಿಜೆಪಿಯವರನ್ನು ತೆಗಳುವುದು ವೈದ್ಯರಿಗೆ ಮಾಮೂಲಾಗಿದೆ. ಬೇಡ್ತಿ ಸಮಾವೇಶದಲ್ಲಿ ಗುರುಗಳ ಎದುರಿಗೆ ಎಲ್ಲರೂ ಒಗ್ಗೂಡಿ ಈ ಯೋಜನೆಯನ್ನು ವಿರೋಧಿಸೋಣ ಎಂದ ವೈದ್ಯರು, ಮಾರನೇ‌ ದಿನವೇ ಇದು ಕೇಂದ್ರ ಸರ್ಕಾರದ ಯೋಜನೆ, ಅವರು ಬಂದ್ ಮಾಡಲಿ ಎಂದು ಕಾಗೇರಿಯವರನ್ನು ಆರೋಪಿಸಿ ಮಾತನಾಡುವ ಮೂಲಕ ತಮ್ಮ ಡಬ್ಬಲ್ ಸ್ಟ್ಯಾಂಡರ್ಡ್ ಅನ್ನು ಜಗಜ್ಜಾಹೀರುಗೊಳಿಸಿದ್ದಾರೆ. ಸಚಿವರ ಕುರಿತಾಗಿ ನಮಗೆಲ್ಲ ಗೌರವವಿದೆ, ಆದರೆ ಸುಳ್ಳಿನ ಮಾತುಗಳು ಸಚಿವ ಮಂಕಾಳ ವೈದ್ಯರಿಗೆ ಶೋಭೆಯಲ್ಲ ಎಂದು ಅವರು ಹೇಳಿದರು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಯಾವಾಗ ವೈದ್ಯರೇ ?
ಚುನಾವಣೆಯಲ್ಲಿ ಗೆದ್ದು ಬಂದರೆ ಕ್ಷೇತ್ರದ ಜನರಿಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಟ್ಟಿಸುತ್ತೇನೆ ಎಂದಿದ್ದ ವೈದ್ಯರಿಗೆ ಆಸ್ಪತ್ರೆ ಇದೀಗ ಮರೆತು ಹೋಯಿತೇ ? ನಿಮ್ಮದೇ ಕ್ಷೇತ್ರದ ಜನರಿಗೆ ಆಸ್ಪತ್ರೆ ಭಾಗ್ಯ ಇಲ್ಲವಾಗಿದೆ. ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಕುಮಟಾದಲ್ಲಿ ಘೋಷಣೆ ಮಾಡಿದ್ದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವಿಚಾರವನ್ನೂ ತಾವು ಮುಂದುವರೆಸಿಲ್ಲ, ಇದು ಹೀಗೆಯೇ ಮುಂದುವರೆದರೆ, ಜನರಿಗೆ ಆಸ್ಪತ್ರೆ ಸೌಲಭ್ಯ ದೊರೆಯುವುದು ಯಾವಾಗ ? ಕ್ಷೇತ್ರದ ಜನರು ತಮ್ಮನ್ನು ಆರಿಸಿ ಕಳಿಸಿದ್ದು ಸಚಿವರಾಗಿ ಹಣ ಗಳಿಸಿ, ನಿಮ್ಮ‌ ಸ್ವಂತ ಹಣದಲ್ಲಿ ಆಸ್ಪತ್ರೆ ಮಾಡಲಿ ಎಂದಲ್ಲ, ಬದಲಾಗಿ ನಿಮಗಿರುವ ಅಧಿಕಾರದಲ್ಲಿ ಕ್ಷೇತ್ರಕ್ಕೊಂದು ಸರ್ಕಾರಿ ಸುಸಜ್ಜೀತ ವೈದ್ಯಕೀಯ ವ್ಯವಸ್ಥೆ ಮಾಡಲಿ ಎಂದಾಗಿದೆ. ಜನಕ್ಕೆ ಉಚಿತವಾಗಿ ವೈದ್ಯಕೀಯ ಸೌಲಭ್ಯ ಸಿಗಬೇಕಾಗಿದೆ.
ಮಾತೆತ್ತಿದರೆ ಬೇಡ್ತಿ-ವರದಾ ಯೋಜನೆ ಬಜೆಟ್ ನಲ್ಲಿ ಘೋಷಣೆ ಆಗಿದೆ ಎನ್ನುವ ವೈದ್ಯರಿಗೆ, ಶಿರಸಿಗೆ ಪರಿಸರ ವಿಶ್ವವಿದ್ಯಾಲಯ, ಮೇಲ್ದರ್ಜೆಗೇರಿದ ಆಸ್ಪತ್ರೆಗೆ ಅನುದಾನಗಳೂ ಸಹ ಬಜೆಟ್ ನಲ್ಲಿ ಘೋಷಣೆಯಾಗಿದೆ‌. ಆದರೆ ನಿಮ್ಮ ಕಾಂಗ್ರೆಸ್ ಸರಕಾರಕ್ಕೆ ಜನರಿಗೆ ಬೇಕಾದ ಯೋಜನೆ ಅನಿಷ್ಠಾನ ಮಾಡುವ ಬದಲು, ಬೇಡ್ತಿ ತಿರುವು ಯೋಜನೆಯಂತಹ ಪರಿಸರಕ್ಕೆ ಮಾರಕ ಯೋಜನೆ ಕಾರ್ಯಗತಗೊಳಿಸುವುದರ ಹಿಂದಿನ ಉದ್ಧೇಶವೇನು ? ಶರಾವತಿ ಪಂಪ್ಡ್ ಸ್ಟೋರೆಜ್ ಯೋಜನೆ ರಾಜ್ಯ ಸರ್ಕಾರದ್ದೇ ಯೋಜನೆಯಾಗಿದ್ದು, ಜನರ ವಿರೋಧವಿದ್ದರೂ ಅದನ್ನು ಯಾಕೆ ಆರಂಭ ಮಾಡುತ್ತಿದ್ದೀರಿ? ಸಮುದ್ರ ಸ್ವಚ್ಛ ಮಾಡಲು 800 ಕೋಟಿ ಖರ್ಚು ಮಾಡಿದ್ದೇವೆ ಎನ್ನುವ ನೀವು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಯಾಕೆ ಕೊಡುತ್ತಿಲ್ಲ?
ಈ ಎಲ್ಲ ಹಿನ್ನಲೆಯಲ್ಲಿ ಸಚಿವರು ಕೂಡಲೇ ಜಿಲ್ಲೆಯ ಜನರಿಗೆ ಆಸ್ಪತ್ರೆ ಸೌಲಭ್ಯವನ್ನು ಸರಕಾರದಿಂದ ಒದಗಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಪ್ರಮುಖರಾದ ಶ್ರೀನಿವಾಸ ನಾಯ್ಕ, ಮಂಜುನಾಥ ನಾಯ್ಕ, ರಮೇಶ ನಾಯ್ಕ, ರಾಘವೇಂದ್ರ ನಾಯ್ಕ, ಗಣೇಶ ಹೆಗಡೆ ಸೇರಿದಂತೆ ಇನ್ನಿತರರು ಇದ್ದರು.