ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ರಾಮನಗರ ಕ್ಲಸ್ಟರಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಿಂದೋಳಿ ಶಾಲೆಯಲ್ಲಿ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಸುಭಾಷ್ ಚಂದ್ರ ಬೋಸ್ ರ ಭಾವಚಿತ್ರಕ್ಕೆ ದೀಪ ಬೆಳಗುವದರ ಜೊತೆಗೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ ಮಾತನಾಡಿ ಸುಭಾಷ್ ಚಂದ್ರ ಬೋಸ್ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಧೀಮಂತ ನಾಯಕ,ಕ್ರಾಂತಿಕಾರಿ ಮತ್ತು ದೇಶಭಕ್ತರು.ತಮ್ಮ ಧೈರ್ಯ,ನಾಯಕತ್ವ ಮತ್ತು ಜೈ ಹಿಂದ್ ಘೋಷಣೆಯೊಂದಿಗೆ ದೇಶದ ಜನರನ್ನು ಎಚ್ಚರಿಸಿದ ಇವರು ನೇತಾಜಿ ಎಂದು ಕರೆಯಲ್ಪಡುವ ಭಾರತದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ.ಬ್ರಿಟಿಷ ಆಳ್ವಿಕೆಯ ವಿರುದ್ಧ ಹೋರಾಡಲು ಭಾರತೀಯ ರಾಷ್ಟ್ರೀಯ ಸೇನೆ(INA)ರಚಿಸಿ,”ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ “ಎಂಬ ಘೋಷಣೆಯ ಮೂಲಕ ಲಕ್ಷಾಂತರ ಜನರನ್ನು ಪ್ರೇರೇಪಿಸಿದರು.
ಕಟಕ್ ನಲ್ಲಿ ಜನಿಸಿದ ಇವರು ICS ತೊರೆದು ಕಾಂಗ್ರೆಸ್ ಸೇರಿ,ನಂತರ ಫಾರ್ವರ್ಡ್ ಬ್ಲಾಕ್ ಸ್ಥಾಪಿಸಿ,ಆಜಾದ್ ಹಿಂದ್ ಫೌಜ್ ಮೂಲಕ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು.ಸುಭಾಷ್ ಚಂದ್ರ ಬೋಸ್ ಅವರ ಜೀವನ ದೇಶಕ್ಕೆ ಸಮರ್ಪಣೆಯ ಮತ್ತು ಅಚಲ ದೇಶಭಕ್ತಿಯ ಸಂಕೇತವಾಗಿದೆ.ಅವರ ಧೈರ್ಯ,ನಾಯಕತ್ವ ಮತ್ತು ಭಾರತದ ಸ್ವಾತಂತ್ರ್ಯದ ಬಲವಾದ ಸಂಕಲ್ಪ ಇಂದಿಗೂ ಯುವಪೀಳಿಗೆಗೆ ಸ್ಫೂರ್ತಿಯಾಗಿದೆ. ಸಹ ಶಿಕ್ಷಕರಾದ ಆನಂದ ಪಿ. ಮಾತನಾಡಿ ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತದ ಸ್ವಾತಂತ್ರ್ಯ ಹೋರಾಟದ ಅತ್ಯಂತ ಪ್ರಭಾವಶಾಲಿ ಕ್ರಾಂತಿಕಾರಿ ನಾಯಕರಲ್ಲಿ ಒಬ್ಬರು. ಇಂಡಿಯನ್ ನ್ಯಾಷನಲ್ ಆರ್ಮಿ ( INA),,ಆಜಾದ್ ಹಿಂದ ಫೌಜ್ ಸ್ಥಾಪನೆ,ಫಾರ್ವರ್ಡ್ ಬ್ಲಾಕ್ ರಚನೆ,ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಮತ್ತು ಬ್ರಿಟಿಷರ ವಿರುದ್ಧ ಹೋರಾಟದ ಮೂಲಕ ಅವರು ಸ್ವಾತಂತ್ರ್ಯಕ್ಕೆ ಅಪಾರ ಕೊಡುಗೆ ನೀಡಿದರು.ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ ಎಂಬ ಘೋಷಣೆಯೊಂದಿಗೆ ಲಕ್ಷಾಂತರ ಜನರನ್ನು ಪ್ರೇರಿಪಿಸಿದರು.
ಅವರ ದೇಶಭಕ್ತಿ ಮತ್ತು ಸಶಸ್ತ್ರ ಹೋರಾಟದ ದ್ರಷ್ಟಿಕೋನವು ಭಾರತದ ಸ್ವಾತಂತ್ರ್ಯ ಹೋರಾಟದ ಸಂಗ್ರಾಮದಲ್ಲಿ ಒಂದು ವಿಶಿಷ್ಟ ಅಧ್ಯಾಯವಾಗಿದೆ ಎಂದು ಹೇಳಿದರು. ಸಹ ಶಿಕ್ಷಕಿಯಾದ ವಿದ್ಯಾ ಮೇಡಂ ಸುಭಾಷ್ ಚಂದ್ರ ಬೋಸ್ ರ ಕುರಿತು ಮಾತನಾಡಿದರು. ವಿದ್ಯಾರ್ಥಿಗಳಿಂದ ಸುಭಾಷ್ ಚಂದ್ರ ಬೋಸ್ ರಕುರಿತು ಪ್ರಬಂಧ, ಭಾಷಣ ಸ್ಪರ್ಧೆಗಳು ನಡೆದವು. ಕೊನೆಯಲ್ಲಿ ಎಲ್ಲರಿಗೂ ವಂದನಾರ್ಪಣೆಯನ್ನು ಶಿಕ್ಷಕಿಯಾದ ವಿದ್ಯಾ ಮೇಡಂ ಸಲ್ಲಿಸಿದರು.
