ಸುದ್ದಿ ಕನ್ನಡ ವಾರ್ತೆ
. ಮುಂಡಗೋಡ: ತಾಲೂಕಿನ
ವಿವಿಧ ಶಾಲೆಗಳಲ್ಲಿ ಬಿಸಿಯೂಟಕ್ಕೆ ತರಕಾರಿಗಳನ್ನು ಸಂತೆಗಳಿಗೆ ಹೋಗಿ ಖರೀದಿಸಿ ತರಲಾಗುತ್ತದೆ. ಆದರೆ ಕುರ್ಲಿ ಶಾಲೆಯಲ್ಲಿ ಶಾಲೆಯಲ್ಲೇ ಬೆಳೆದ ತರಕಾರಿಗಳನ್ನು ಬಳಸುತ್ತಿರುವುದು ವಿಶೇಷವಾಗಿದೆ.
ತಾಲೂಕಿನ ಕುರ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಾವಯುವ ಕೃಷಿ ಪದ್ದತಿ ಬಳಸಿ ವಿವಿಧ ತರಕಾರಿಗಳನ್ನು ಬೆಳೆದು ಮಧ್ಯಾಹ್ನದ ಬಿಸಿಯೂಟಕ್ಕೆ ಶಾಲೆಯಲ್ಲಿ ಬೆಳೆದ ಬೆಳೆಗಳನ್ನೇ ಬಳಸಲಾಗುತ್ತಿದೆ. ಸಂತೆಯಲ್ಲಿ ಖರೀದಿಸಿ ತರುವ ತರಕಾರಿಗಳಿಗೆ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಸುತ್ತಾರೆ. ಇದರಿಂದ ಮಕ್ಕಳ ಆರೋಗ್ಯಕ್ಕೂ ಹಾನಿಕಾರಕವಾಗಿರುತ್ತವೆ. ಅಲ್ಲದೆ ತರಕಾರಿಗಳ ಗುಣಮಟ್ಟವು ಸರಿಯಾದ ರೀತಿಯಲ್ಲಿ ಇರುವುದಿಲ್ಲ.
ಈ ಎಲ್ಲ ಕಾರಣದಿಂದ ಕುರ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಕಷ್ಟು ವಿಶಾಲವಾದ ಆವರಣವಿರುವುದರಿಂದ ಎಸ್.ಡಿ.ಎಮ್.ಸಿ. ಸದಸ್ಯರು, ಪಾಲಕರು ಹಾಗೂ ಮಕ್ಕಳು ಬಿಡುವಿನ ಸಮಯದಲ್ಲಿ ಸಾವಯುವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮೂಲಂಗಿ, ಬಿನ್ಸ್, ಬದನೆಕಾಯಿ, ಹರಿವೆ ಸೊಪ್ಪು, ಟೊಮೆಟೋ ಸೇರಿದಂತೆ ವಿವಿಧ ತರಕಾರಿಗಳನ್ನು ಬೆಳೆದು ಶಾಲೆಯ ಬಿಸಿಯೂಟಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಶಾಲೆಯ ಶಿಕ್ಷಕರು ಮಕ್ಕಳಿಗೆ
ಸಾವಯುವ ಕೃಷಿ ಪದ್ದತಿ ಮೂಲಕ ಬೆಳೆಯುವ ತರಕಾರಿಗಳಿಂದ ಸಿಗುವ ವಿಟಮಿನ್ ಅಂಶದ ಕುರಿತು ಮಾಹಿತಿ ನೀಡುತ್ತಿರುವುದು ಕಂಡುಬಂದಿದೆ. ರಾಸಾಯನಿಕ ಔಷಧ ಹಾಗೂ ಕೀಟನಾಶಕ ಬಳಸದೆ ನಾವು ಕೂಡ ಶಾಲೆಯ ಆವರಣದಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಶಾಲೆಯಲ್ಲಿ ಬೆಳೆದು ಬಿಸಿಯೂಟಕ್ಕೆ ಬಳಸಬಹುದು ಎನ್ನವುದಕ್ಕೆ ಉದಾರಣೆಯಾಗಿದ್ದಾರೆ.
ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಪಾಲಕರ ಸಹಕಾರದಿಂದ ಶಾಲೆಯಲ್ಲೇ ತರಕಾರಿಗಳನ್ನು ಬೆಳೆಯಲು ಶ್ರಮಿಸುತ್ತಿರುವುದರಿಂದ ಮಕ್ಕಳ ಆರೋಗ್ಯವು ಉತ್ತಮವಾಗಲು ಸಹಕಾರಿಯಾಗಲಿದೆ ಎಂದು ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
