ಸುದ್ದಿ ಕನ್ನಡ ವಾರ್ತೆ
ದಾಂಡೇಲಿ : ದಾಂಡೇಲಿ ಪ್ರೀಮಿಯರ್ ಲೀಗ್ ಆಶ್ರಯದಡಿ ಸೀಸನ್ 5 ಹಾಗೂ ಮೂರನೇ ಬಾರಿಗೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯು ಫೆಬ್ರವರಿ: 13 ರಿಂದ ಫೆ : 15 ರವರೆಗೆ ನಗರದ ಡಿ.ಎಫ್.ಎ ಮೈದಾನದಲ್ಲಿ ನಡೆಯಲಿದೆ ಎಂದು ದಾಂಡೇಲಿ ಪ್ರೀಮಿಯರ್ ಲೀಗ್ ಅಧ್ಯಕ್ಷ ಅನಿಲ್ ಪಾಟ್ನೇಕರ ಹೇಳಿದರು.
ಅವರು ನಗರದ ಕಾಮತ್ ಯಾತ್ರಿ ಸಭಾಭವನದಲ್ಲಿ ಬುಧವಾರ ದಾಂಡೇಲಿ ಪ್ರೀಮಿಯರ್ ಲೀಗ್ ಸೀಸನ್-05ರ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ದಾಂಡೇಲಿ ಪ್ರೀಮಿಯರ್ ಲೀಗ್ ಕಳೆದ ನಾಲ್ಕು ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿಕೊಂಡು ಬಂದಿದೆ. ಕಳೆದ ಎರಡು ವರ್ಷಗಳಿಂದ ಹೊನಲು ಬೆಳಕಿನ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಈ ವರ್ಷವೂ ಹೊನಲು ಬೆಳಕಿನಲ್ಲಿ ಪಂದ್ಯಾವಳಿ ನಡೆಯಲಿದೆ. ಫೆ.13 ರಂದು ಕ್ರಿಕೆಟ್ ಪಂದ್ಯಾವಳಿಯ ವಿದ್ಯುಕ್ತ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನೆಯ ದಿನ ವಿಶೇಷ ಪ್ರದರ್ಶನ ಪಂದ್ಯವು ಹೊನಲು ಬೆಳಕಿನಲ್ಲಿ ನಡೆಯಲಿದೆ. ಫೆ. 13 ರಿಂದ ಫೆ. 15 ರವರೆಗೆ ಒಟ್ಟು ಮೂರು ದಿನಗಳವರೆಗೆ ನಗರದಲ್ಲಿ ಕ್ರಿಕೆಟ್ ಹಬ್ಬ ನಡೆಯಲಿದ್ದು, ಈಗಾಗಲೇ ಎಲ್ಲ ಸಿದ್ಧತೆಗಳು ನಡೆಯುತ್ತಿದೆ ಎಂದರು. ಈ ಹಿಂದಿನ ವರ್ಷಗಳಂತೆ ಈ ವರ್ಷವೂ ಒಟ್ಟು 8 ಪ್ರಾಂಚೈಸಿಗಳ ತಂಡ ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ. ಆದರೆ ಈ ವರ್ಷದಿಂದ ಪ್ರತಿ ವರ್ಷವೂ ಪ್ರಾಂಚೈಸಿಯನ್ನು ಬಿಡ್ ಮೂಲಕ ಆಯ್ಕೆ ಮಾಡಲಾಗುವುದು. ಲೀಗ್ ನಾಕೌಟ್ ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಎಂಟು ಬಲಿಷ್ಠ ತಂಡಗಳು ಭಾಗವಹಿಸಲಿದ್ದು, ಒಟ್ಟು 16 ರೋಚಕ ಪಂದ್ಯಗಳು ನಡೆಯಲಿದೆ ಎಂದರು. ಪ್ರತಿ ತಂಡದ 15 ಆಟಗಾರರಲ್ಲಿ 13 ಆಟಗಾರರು ದಾಂಡೇಲಿ ತಾಲೂಕಿನ ನಿವಾಸಿಗಳಾಗಿರಬೇಕು. ಪ್ರತಿ ತಂಡಕ್ಕೆ ಇಬ್ಬರು ಹೊರಗಿನ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶವಿದೆ. ಪ್ರಥಮ ಸ್ಥಾನವನ್ನು ಪಡೆದ ತಂಡಕ್ಕೆ ನಗದು ರೂ: 2,22,222/- ಮತ್ತು ದ್ವಿತೀಯ ಸ್ಥಾನವನ್ನು ಪಡೆದ ತಂಡಕ್ಕೆ ನಗದು ರೂ : 1,11,111/- ಹಾಗೂ ಶಾಶ್ವತ ಫಲಕಗಳನ್ನು ನೀಡಲಾಗುವುದು. ಇದನ್ನು ಹೊರತುಪಡಿಸಿ ಪ್ರತಿಯೊಂದು ಪಂದ್ಯಕ್ಕೂ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಉಳಿದಂತೆ ಒಟ್ಟು ಪಂದ್ಯಾವಳಿಗೆ ಸಂಬಂಧಿಸಿದಂತೆ ಅತ್ಯುತ್ತಮ ಬ್ಯಾಟ್ಸ್ ಮ್ಯಾನ್, ಅತ್ಯುತ್ತಮ ಬೌಲರ್, ಅತ್ಯುತ್ತಮ ಫೀಲ್ಡರ್ ಹಾಗೂ ಮ್ಯಾನ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಬೆಳಿಗ್ಗೆ 08.00 ಗಂಟೆಯಿಂದ ಪಂದ್ಯಾವಳಿ ಆರಂಭವಾಗಲಿದೆ ಎಂದರು. ಈ ಪಂದ್ಯಾವಳಿಯ ಯಶಸ್ಸಿಗೆ ದಾಂಡೇಲಿಯ ಜನತೆ ಸಂಪೂರ್ಣ ಸಹಕಾರವನ್ನು ನೀಡುವ ಮೂಲಕ ಪರಸ್ಪರ ಸೌಹಾರ್ದತೆಯನ್ನು ಸಾರುವ ಈ ಪಂದ್ಯಾವಳಿಯ ಯಶಸ್ಸಿನ ರೂವಾರಿಗಳಾಗಬೇಕೆಂದು ಕರೆ ನೀಡಿದರು.
ದಾಂಡೇಲಿ ಪ್ರೀಮಿಯರ್ ಲೀಗ್ ಉಪಾಧ್ಯಕ್ಷ ಇಮಾಮ್ ಸರ್ವರ್ ಮಾತನಾಡಿ ಇದೇ ಜನವರಿ 25ರಂದು ಪ್ರಾಂಚೈಸಿ ಬಿಡ್ ನಡೆಯಲಿದ್ದು, ಬಿಡ್’ನಲ್ಲಿ ಭಾಗವಹಿಸುವವರು ಬಸ್ ನಿಲ್ದಾಣದ ಮುಂಬಾಗದಲ್ಲಿರುವ ಸ್ಟೇಟ್ ಅಡ್ವೆಂಚರ್ಸ್ ಕಚೇರಿಯಲ್ಲಿ ರೂ.2,000/- ನೊಂದಣಿ ಶುಲ್ಕದೊಂದಿಗೆ ಅರ್ಜಿಯನ್ನು ಸ್ವೀಕರಿಸುವಂತೆ ವಿನಂತಿಸಿದರು. ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವ ಆಟಗಾರರು ಜನವರಿ 27ರ ಒಳಗಡೆ ನಗರದ ಸ್ಟೇಟ್ ಅಡ್ವೆಂಚರ್ಸ್ ಇಲ್ಲಿ ತಮ್ಮ ಹೆಸರನ್ನು ನೋಂದಾಯಿಸುವಂತೆ ಕೋರಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಪಂದ್ಯಾವಳಿಯ ಯಶಸ್ಸಿಗೆ ಸರ್ವರು ಸಹಕರಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ದಾಂಡೇಲಿ ಪ್ರೀಮಿಯರ್ ಲೀಗಿನ ಕಾರ್ಯದರ್ಶಿ ಕುಲದೀಪ್ ಸಿಂಗ್ ರಜಪೂತ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಅತುಲ್ ಮಾಡ್ದೋಳ್ಕರ್, ರಮೇಶ ನಾಯ್ಕ, ಮನೋಹರ ಕದಂ ಉಪಸ್ಥಿತರಿದ್ದರು.
