ಸುದ್ದಿ ಕನ್ನಡ ವಾರ್ತೆ

ಜೋಯಿಡಾ :ಜೋಯಿಡಾ ಕೇಂದ್ರಕ್ಕೆ ಕುಡಿಯುವ ನೀರು ಸರಬರಾಜಾಗುವ ಹುಡಸಾ ಝರಿಯ ನಾಲೆಯ ಹತ್ತಿರದಲ್ಲಿ ಜಿಂಕೆಯ ಕೊಳೆತ ಶವ ಬಿದ್ದಿದೆ. ಕಳ್ಳ ಬಂದೂಕಿಕೆ ಬಲಿಯಾದ ಜಿಂಕೆಯೇ ಎನ್ನುವ ಸಂಶಯ ವ್ಯಕ್ತವಾಗಿದೆ.
ಪಣಸೋಲಿ ವನ್ಯಜೀವಿ ಅರಣ್ಯ ವ್ಯಾಪ್ತಿಗೆ ಬರುವ ಜೋಯಿಡಾ ಕುಡಿಯುವ ನೀರು ಸರಬರಾಜು ಮಾಡುವ ಹುಡಸಾ ಪಂಪ ಹೌಸ ಹತ್ತಿರದ ಝರಿ ನೀರಿನ ನಾಲೆಯಲ್ಲಿ ಜಿಂಕೆಯ ಶವ ಪತ್ತೆಯಾಗಿದೆ.

ಹುಡಸಾ ಕುಡಿಯುವ ನೀರಿನ ಸರಬರಾಜು ಟ್ಯಾಂಕ ಹಿಂದಿನಿಂಲ್ಲೂ ಕಾಡುಪ್ರಾಣಿಗಳ ಕೊಳೆತ ಶವ, ತ್ಯಾಜ್ಯಗಳ ಗಬ್ಬು ನಾರುವ ಅಸೌಚ ತಾಣವಾಗಿ ಹೆಸರು ವಾಸಿಯಾಗಿದೆ. ಅದೇ ಸ್ಥಳದ ಹತ್ತಿರದಲ್ಲಿ ಹರಿವ ಝರಿ ನೀರಿನ ನಾಲೆಯಲ್ಲಿ ಈಗ ಜಿಂಕೆಯ ಕೊಳೆತ ಶವ ಪತ್ತೆಯಾಗಿದೆ. ಇದು ಗುಂಡೇಟಿಗೆ ಬಲಿಯಾಗಿ ಪ್ರಾಣ ಉಳಿಸಿಕೊಳ್ಳಲ್ಲು ನೀರಿನ ನಾಲೆಯಲ್ಲಿ ಬಂದು ಪ್ರಾಣ ಬಿಟ್ಟ ಜಿಂಕೆಯೋ ಅಥವಾ ಇನ್ನಾವ ಕಾರಣದಿಂದ ಸತ್ತಿದೆಯೊ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ.

ಜೋಯಿಡಾ ಕುಡಿಯುವ ನೀರು ಸರಬರಾಜು ಮಾಡುವ ನೀರಿನ ಕೋಳದ ಅಸೌಚ ಹಾಗೂ ಕಿತ್ತು ಬಿದ್ದ ಟ್ಯಾಂಕ ಮೇಲ್ಚಾವಣಿಯ ಜಂಗು ಹಿಡಿದ ಕಬ್ಬಿಣದ ಸಲಾಕೆಗಳ ಅನಾರೋಗ್ಯಕರ ಪರಿಸ್ಥಿತಿಯ ಬಗ್ಗೆ ಹಲವು ಬಾರಿ ಸುದ್ದಿ ಮಾಡಿ ಜೋಯಿಡಾ ಗ್ರಾ. ಪಂ. ಗೆ ಎಚ್ಚರಿಸಿದರೂ, ಜನರ ಆರೋಗ್ಯದ ಕಡೆ ಕಾಳಜಿ ವಹಿಸದ ಗ್ರಾ. ಪಂ. ಅಧಿಕಾರಿಗಳ, ಜನಪ್ರತಿನಿದಿಗಳ ನಡೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ, ಅದೇ ಸ್ಥಳದಲ್ಲಿ ಕುಡಿಯುವ ನೀರಿನ ಝರಿ ಹರಿವ ನಾಲೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಬಿದ್ದ ಜಿಂಕೆಯ ಶವ ಕಾಣದೇ ಉಳಿದಿರುವುದು ಅಧಿಕಾರಿಗಳ, ಮತ್ತು ಕುಡಿಯುವ ನೀರಿನ ಶುದ್ದತೆ ನಿರ್ವಹಣೆ ಮಾಡುವ ಸಿಬ್ಬಂದಿಗಳ ದಿವ್ಯ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿಗಳಿಗೂ ಈ ವಿಷಯ ತಿಳಿಯದೇ ಇದ್ದ ಕಾರಣ ಶವ ಕೊಳೆಯುತ್ತಿರುವ ಸ್ಥಿತಿ ತಲುಪಿದೆ. ಇಲಾಖೆ ಕೂಡಲೆ ಪರಿಶೀಲಿಸಿ, ಶಾವಿನ ಕಾರಣ ಗುರುತಿಸಿ, ತನಿಖೆ ಕೈಗೊಳ್ಳಬೇಕಿದೆ. ಇಲಾಖೆಯ ನಿಯಮದಂತೆ ಅಂತ್ಯಸಂಸ್ಕಾರ ನಡೆಸಬೇಕಿದೆ.

ಜನರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದ, ಕುಡಿಯುವ ನೀರಿನಲ್ಲಿ ವಿಷಕಾರಕ ವಸ್ತು ಬಿದ್ದರೂ ನಿತ್ಯ ಪರಿಶೀಲಿಸಿ ಸಾರ್ವಜನಿಕರ ಆರೋಗ್ಯದ ಕಾಳಜಿ ತೋರದ ಗ್ರಾ. ಪಂ. ಜನಪ್ರತಿನಿದಿಗಳು ಹಾಗೂ ಜವಾಬ್ದಾರಿಯುತ ಅಧಿಕಾರಿಗಳ ನಿರ್ಲಕ್ಷ ಜನರ ಜೀವಕ್ಕೆ ಕುತ್ತು ತಂದರೆ ಆಶ್ಚರ್ಯವಿಲ್ಲ.