ಸುದ್ದಿ ಕನ್ನಡ ವಾರ್ತೆ
ಕುಮಟಾ:ಪಟ್ಟಣದಲ್ಲಿ ಶಾಲಾ ಮಕ್ಕಳನ್ನು ಮನೆಗೆ ತಲುಪಿಸಲು ತೆರಳುತ್ತಿದ್ದ ಓಮಿನಿ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಕುಮಟಾ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ನಡೆದಿದೆ.
ಈ ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿಗಳು ಹಾಗೂ ವಾಹನ ಚಾಲಕ ಗಾಯಗೊಂಡಿದ್ದಾರೆ.
ಪಟ್ಟಣದ ಡಾ. ಎ.ವಿ. ಬಾಳಿಗಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ತನಿಷ್ಕ (15), ಅರ್ಜುನ್ (13), ಅದ್ವಿತ್ (12) ಹಾಗೂ ಆಯಿರಾ (10) ಗಾಯಗೊಂಡ ವಿದ್ಯಾರ್ಥಿಗಳು. ಇವರೆಲ್ಲರೂ ಶಾಲೆಯಿಂದ ಮನೆಗೆ ಖಾಸಗಿ ಓಮಿನಿ ವಾಹನದಲ್ಲಿ ತೆರಳುತ್ತಿದ್ದರು. ವಾಹನ ಚಾಲನೆ ಮಾಡುವಾಗ ಚಾಲಕ ಜಟ್ಟಿ ಪರಮೇಶ್ವರ ಮುಕ್ರಿ ಅವರಿಗೆ ಹಠಾತ್ ತಲೆಸುತ್ತು ಬಂದಿದೆ. ಪರಿಣಾಮವಾಗಿ ವಾಹನವು ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೊಲೆರೋ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಓಮಿನಿ ವಾಹನದ ಮುಂಭಾಗ ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ವಾಹನದಲ್ಲಿದ್ದ ಐವರು ವಿದ್ಯಾರ್ಥಿಗಳ ಪೈಕಿ ನಾಲ್ವರಿಗೆ ಹಾಗೂ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ಪೊಲೀಸರು ತಕ್ಷಣವೇ ನೆರವಿಗೆ ಧಾವಿಸಿದ್ದು, ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಕುಮಟಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
