ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಕರಂಜೋಯಿಡಾ ಗ್ರಾಮದಲ್ಲಿ ಕಳೆದ ಮೂರು–ನಾಲ್ಕು ವರ್ಷಗಳ ಹಿಂದೆ ಮೊಬೈಲ್ ಟವರ್‌ಗೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದರೂ, ಇಂದಿಗೂ ಟವರ್ ನಿರ್ಮಾಣವಾಗಿಲ್ಲ, ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಜಾಗ ಪರಿಶೀಲನೆ (ಸರ್ವೆ) ನಡೆಸಿ ಹೋಗಿದ್ದು, ಟವರ್ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಗ್ರಾಮಸ್ಥರು ಈಗಾಗಲೇ ಒದಗಿಸಿದ್ದಾರೆ. ಜಾಗ ಸಿದ್ಧವಾಗಿದ್ದರೂ ಸಹ ಟವರ್ ಕಾರ್ಯ ಇನ್ನೂ ಆರಂಭವಾಗಿಲ್ಲ ಎಂದು ಕಾರ್ಟೋಳಿಯ ದೇವಿದಾಸ ಮಹಾದೇವ ವೇಳಿಪ ಮಾಧ್ಯಮಕ್ಕೆ ತಿಳಿಸಿರುತ್ತಾರೆ.
ಮುಂದುವರಿದು ಮೊಬೈಲ್ ಟವರ್ ಇಲ್ಲದ ಕಾರಣ ಕಾರ್ಟೋಳಿ ಗ್ರಾಮದ ಜನರು ಭಾರೀ ತೊಂದರೆ ಅನುಭವಿಸುತ್ತಿದ್ದು, ಮೊಬೈಲ್ ನೆಟ್‌ವರ್ಕ್ ಪಡೆಯಲು ಸುಮಾರು 20 ಕಿಲೋಮೀಟರ್ ದೂರ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ಬ್ಯಾಂಕ್, ಸರ್ಕಾರಿ ಕೆಲಸ, ಶಿಕ್ಷಣ, ಆರೋಗ್ಯ ಮತ್ತು ಆನ್‌ಲೈನ್ ಸೇವೆಗಳಂತಹ ದಿನನಿತ್ಯದ ಅಗತ್ಯ ಕಾರ್ಯಗಳಿಗೆ ತೀವ್ರ ಸಮಸ್ಯೆ ಉಂಟಾಗಿದೆ ಎಂದು ಅವರು ಹೇಳಿದರು.
ಇತರೆ ಗ್ರಾಮಗಳಲ್ಲಿ ಮೊಬೈಲ್ ಟವರ್‌ಗಳು ಸ್ಥಾಪನೆಯಾಗಿ, ಎಲ್ಲ ಸಿದ್ಧತೆಗಳಿದ್ದರೂ ನಮ್ಮ ಗ್ರಾಮದಲ್ಲಿ ಮಾತ್ರ ಟವರ್ ಆಗಿರುವುದು ಆಶ್ಚರ್ಯಕರ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಕಾರ್ಟೋಳಿ ಗ್ರಾಮ ಹಿಂದುಳಿದ ಪ್ರದೇಶವಾಗಿದ್ದು, ಅಭಿವೃದ್ಧಿಗಾಗಿ ಮೊಬೈಲ್ ಟವರ್ ಅತ್ಯಂತ ಅಗತ್ಯವಾಗಿದೆ ಎಂದರು.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಕರಂಜೋಯಿಡಾ ಗ್ರಾಮದಲ್ಲಿ ಶೀಘ್ರವಾಗಿ ಮೊಬೈಲ್ ಟವರ್ ನಿರ್ಮಾಣ ಕಾರ್ಯ ಆರಂಭಿಸಬೇಕು ಎಂದು ಅವರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.
